ಬ್ರಿಟನ್‌ನಿಂದ ಆಗಮಿಸಿದ 279 ಮಂದಿ ತೆಲಂಗಾಣದಲ್ಲಿ ನಾಪತ್ತೆ

ಹೈದರಾಬಾದ್, ಡಿ.27: ಇತ್ತೀಚೆಗೆ ಬ್ರಿಟನ್‌ನಿಂದ ವಾಪಸ್ಸಾಗಿದ್ದ 279 ಮಂದಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ರಾಜ್ಯದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ ಬ್ರಿಟನ್‌ನಿಂದ ಆಗಮಿಸಿದ ಮತ್ತೆ 59 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡಿದ್ದು, ಬ್ರಿಟನ್‌ನಿಂದ ವಾಪಸ್ಸಾದವರ ಪೈಕಿ ದೇಶಾದ್ಯಂತ ಒಟ್ಟು 119 ಮಂದಿಗೆ ಸೋಂಕು ತಗಲಿದೆ.
ಎಲ್ಲ ವೈರಸ್ ಪಾಸಿಟಿವ್ ಪ್ರಯಾಣಿಕರ ಮಾದರಿಗಳನ್ನು ಸಂಗ್ರಹಿಸಿ, ಅದನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, ಬ್ರಿಟನ್‌ನಲ್ಲಿ ಇತ್ತೀಚೆಗೆ ಕಂಡುಬಂದ, ಹೆಚ್ಚು ವೇಗವಾಗಿ ಹರಡುವ ರೂಪಾಂತರಿತ ವೈರಸ್ ಪ್ರಬೇಧವೇ ಎನ್ನುವುದು ಸೋಮವಾರ ತಿಳಿಯಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ತೆಲಂಗಾಣದಲ್ಲಿ ಮೂರು ಹೊಸ ಪ್ರಕರಣಗಳು ವರದಿಯಾಗಿದ್ದು, ಬ್ರಿಟನ್‌ನಿಂದ ರಾಜ್ಯಕ್ಕೆ ವಾಪಸ್ಸಾದವರಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿದೆ. ಗೋವಾದಲ್ಲಿ 16 ಮಂದಿಗೆ ಸೋಂಕು ದೃಢಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಹೊಸ 14 ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 17ಕ್ಕೇರಿದೆ. ನಾಸಿಕ್‌ನಲ್ಲಿ ಮತ್ತೊಬ್ಬ ಪ್ರಯಾಣಿಕನಿಗೆ ಸೋಂಕು ದೃಢಪಟ್ಟಿದ್ದು, ಬ್ರಿಟನ್‌ನಲ್ಲೇ ಆತನಿಗೆ ಸೋಂಕು ತಗಲಿತ್ತೇ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಏಕೆಂದರೆ ಡಿಸೆಂಬರ್ 13ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಸಿದ ಕೊರೋನ ಪತ್ತೆ ಪರೀಕ್ಷೆಯಲ್ಲಿ ಆತನಿಗೆ ನೆಗೆಟಿವ್ ಬಂದಿತ್ತು.
ಕೇರಳದಲ್ಲಿ ಮತ್ತೆ ಮೂವರು ಪ್ರಯಾಣಿಕರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ಎಂಟಕ್ಕೇರಿದೆ. ಉತ್ತರ ಪ್ರದೇಶಕ್ಕೆ ಬ್ರಿಟನ್‌ನಿಂದ ವಾಪಸ್ಸಾದವರಲ್ಲಿ 8 ಮಂದಿಗೆ, ಕರ್ನಾಟಕದ ಮೈಸೂರಿನಲ್ಲಿ ಒಬ್ಬರಿಗೆ ಮತ್ತು ಆಂಧ್ರ ಪ್ರದೇಶದಲ್ಲಿ ಆರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ತೆಲಂಗಾಣದಲ್ಲಿ ಸಂಪರ್ಕಕ್ಕೆ ಸಿಗದ ಪ್ರಯಾಣಿಕರಲ್ಲಿ 92 ಮಂದಿ ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ಕೇರಳ ಮತ್ತು ಕರ್ನಾಟಕಕ್ಕೆ ಸೇರಿದವರಾಗಿದ್ದು, 184 ಮಂದಿ ತಪ್ಪು ವಿಳಾಸ ಮತ್ತು ದೂರವಾಣಿ ಸಂಖ್ಯೆ ನೀಡಿದ್ದಾರೆ. ಆಯಾ ರಾಜ್ಯ ಸರಕಾರಗಳಿಗೆ ಅವರ ವಿವರಗಳನ್ನು ನೀಡಲಾಗಿದೆ. ಇವರ ಪತ್ತೆಗೆ ಆ ರಾಜ್ಯಗಳು ನೆರವು ನೀಡಬಹುದು ಉಳಿದವರನ್ನು ಪತ್ತೆ ಹಚ್ಚಲು ಪ್ರಯತ್ನ ಮುಂದುವರಿದಿದೆ ಎಂದು ತೆಲಂಗಾಣದ ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಜಿ.ಶ್ರೀನಿವಾಸ ರಾವ್ ಹೇಳಿದ್ದಾರೆ.







