ಕೋವಿಡ್-19 ಸಾಂಕ್ರಾಮಿಕವೇ ಕೊನೆಯಲ್ಲ: ಡಬ್ಲ್ಯುಎಚ್‌ಓ ಮುಖ್ಯಸ್ಥ ಎಚ್ಚರಿಕೆ

ಜಿನೀವಾ, ಡಿ.27: ಕೊರೋನ ವೈರಸ್ ಸಂಕಷ್ಟ ಕೊನೆಯ ಸಾಂಕ್ರಾಮಿಕವೇನಲ್ಲ. ಹವಾಮಾನ ಬದಲಾವಣೆ ಮತ್ತು ಪ್ರಾಣಿಗಳ ಕಲ್ಯಾಣ ಸಮಸ್ಯೆಯನ್ನು ನಿಭಾಯಿಸದಿದ್ದರೆ, ಮಾನವ ಆರೋಗ್ಯ ಸುಧಾರಿಸುವ ಎಲ್ಲ ಪ್ರಯತ್ನಗಳೂ ಮಣ್ಣುಪಾಲಾಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಡ್ ಅಧನೊಮ್ ಘೇಬ್ರಿಯಾಸಿಸ್ ಎಚ್ಚರಿಸಿದ್ದಾರೆ.
ಮುಂದಿನ ಸಾಂಕ್ರಾಮಿಕಕ್ಕೆ ಸಜ್ಜಾಗದೇ, ಈಗ ಕಾಡುತ್ತಿರುವ ಸಾಂಕ್ರಾಮಿಕಕ್ಕೇ ಹಣ ಚೆಲ್ಲುವುದು "ಆಪಾಯಕಾರಿ ಹಾಗೂ ದೂರದೃಷ್ಟಿ ಇಲ್ಲದ ನಿರ್ಧಾರ" ಎಂದು ಮೊಟ್ಟಮೊದಲ ಅಂತಾರಾಷ್ಟ್ರೀಯ ಸಾಂಕ್ರಾಮಿಕ ಸನ್ನದ್ಧತೆ ದಿನದ ಅಂಗವಾಗಿ ನೀಡಿದ ವಿಡಿಯೊ ಸಂದೇಶದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದಿಂದ ಪಾಠ ಕಲಿಯಲು ಇದು ಸುಸಂದರ್ಭ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. "ಸುದೀರ್ಘ ಅವಧಿಯಿಂದಲೂ ವಿಶ್ವ ಭೀತಿ ಹಾಗೂ ನಿರ್ಲಕ್ಷ್ಯದ ಆವರ್ತದಲ್ಲೇ ಕಾರ್ಯಾಚರಣೆ ನಡೆಸುತ್ತಿದೆ" ಎಂದು ಹೇಳಿದ್ದಾರೆ.
"ಒಂದು ಸಾಂಕ್ರಾಮಿಕಕ್ಕೇ ನಾವು ಹಣ ಸುರಿಯುತ್ತಿದ್ದೇವೆ. ಅದು ಮುಗಿದ ಬಳಿಕ ಆ ಬಗ್ಗೆ ಮರೆಯುತ್ತೇವೆ. ಮುಂದಿನದನ್ನು ತಡೆಯಲು ಏನೂ ಮಾಡುವುದಿಲ್ಲ. ಇದು ದೂರದೃಷ್ಟಿ ಇಲ್ಲದ ಅಪಾಯಕಾರಿ ನಡೆ. ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ" ಎಂದು ವಿಶ್ಲೇಷಿಸಿದ್ದಾರೆ.
ಸಂಭಾವ್ಯ ಮಾರಕ ಸಾಂಕ್ರಾಮಿಕಗಳಿಗೆ ವಿಶ್ವದ ಸನ್ನದ್ಧತೆ ಶೂನ್ಯ ಎಂದು ಜಾಗತಿಕ ಸನ್ನದ್ಧತೆ ಕಣ್ಗಾವಲು ಮಂಡಳಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನೀಡಿದ ಪ್ರಥಮ ವಾರ್ಷಿಕ ವರದಿಯಲ್ಲೇ ಎಚ್ಚರಿಸಿತ್ತು.
"ಇದು ಕೊನೆಯ ಸಾಂಕ್ರಾಮಿಕವಲ್ಲ ಎನ್ನುವುದನ್ನು ಇತಿಹಾಸ ನಮಗೆ ಹೇಳುತ್ತದೆ. ಸಾಂಕ್ರಾಮಿಕಗಳು ಜೀವನದ ವಾಸ್ತವಗಳು. ಈ ಸಾಂಕ್ರಾಮಿಕವು ಮನುಷ್ಯ, ಪ್ರಾಣಿಗಳು ಮತ್ತು ಭೂಮಿಯ ಆರೋಗ್ಯದ ನಡುವೆ ಸಂಪರ್ಕ ಇರುವುದನ್ನು ಸ್ಪಷ್ಟವಾಗಿ ತೋರಿಸಿದೆ" ಎಂದು ಟೆಡ್ರೋಸ್ ಹೇಳಿದ್ದಾರೆ.







