ಗ್ರಾಪಂ 2ನೇ ಹಂತದ ಚುನಾವಣೆ: ಬೆಳ್ತಂಗಡಿ, ಕಡಬದಲ್ಲಿ ಬಿರುಸುಗೊಳ್ಳುತ್ತಿದೆ ಮತದಾನ
ಮದುವೆ ಸಂಭ್ರಮದ ಮಧ್ಯೆ ಬಂದು ಮತದಾನ ಮಾಡಿದ ಸಹೋದರಿಯರು

ಬೆಳ್ತಂಗಡಿ, ಡಿ.27: ತಾಲೂಕಿನಲ್ಲಿ 46 ಗ್ರಾಪಂಗಳ 634 ಸ್ಥಾನಗಳಿಗೆ 292 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭಗೊಂಡಿದೆ. ಚಳಿ ಮಧ್ಯೆಯೂ ಉತ್ಸಾಹದಿಂದ ಮುಂಜಾನೆಯೇ ಮತದಾನಕ್ಕೆ ಸರತಿ ಸಾಲು ಕಂಡುಬರುತ್ತಿದೆ.
ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ಪ್ರತಾಪ ಸಿಂಹ ನಾಯಕ್ ಸೇರಿದಂತೆ ರಾಜಕೀಯ ಮುಖಂಡರುಗಳು ಕುಟುಂಬ ಸಮೇತರಾಗಿ ವಿವಿಧ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿದರು.
ಶ್ರೀ ಕ್ಷೇತ್ರದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಎಸ್.ಡಿ.ಎಂ. ಹಿರಿಯ ಪ್ರಾಧಮಿಕ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ತೆರಳಿ ಮತ ಚಲಾಯಿಸಿದರು.
ಮದುವೆ ಸಂಭ್ರಮದ ಮಧ್ಯೆ ಬಂದು ಮತಹಾಕಿದ ಸಹೋದರಿಯರು!
ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಇಬ್ರಾಹೀಂ ಕೂಳೂರು ಅವರ ಇಬ್ಬರು ಮಕ್ಕಳಾದ ಝುಹುರಾ ಮತ್ತು ಖೈರುನ್ನಿಸಾ ಸಹೋದರಿಯರು ತಮ್ಮದೇ ಮದುವೆ ಸಂಭ್ರಮದ ಮಧ್ಯೆಯೂ ಮುಂಡಾಜೆ ಗ್ರಾಮದ 103 ಭಾಗ ಸಂಖ್ಯೆಯ ಮತಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಸಾಮಾಜಿಕ ಬದ್ಧತೆ ಮೆರೆದರು.
ತಾಲೂಕಿನ 46 ಗ್ರಾಪಂಗಳ ಒಟ್ಟು 631 ಸ್ಥಾನಗಳ ಪೈಕಿ ಒಟ್ಟು 6 ಗ್ರಾಪಂಗಳ 7 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಪ್ರಸಕ್ತ 624 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ಬೆಳ್ತಂಗಡಿ ತಾಲೂಕಿನ 2,04,205 ಮತದಾರರು ಇಂದು ಒಟ್ಟು 1,439 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.
ಕಡಬ ವರದಿ:
ಕಡಬ ತಾಲೂಕಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಯು ಬಿರುಸಿನಿಂದ ಸಾಗುತ್ತಿದೆ. 21 ಗ್ರಾಮ ಪಂಚಾಯತ್ ಗಳ 91 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 285 ಸ್ಥಾನಗಳಿಗೆ 642 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಆಕರ್ಷಿಸುತ್ತಿರುವುದು ಕಂಡು ಬರುತ್ತಿದೆ. ಗ್ರಾಮೀಣ ಭಾಗದ ಮತದಾರರನ್ನು ಕರೆತರಲು ಅಭ್ಯರ್ಥಿಗಳು ವಾಹನದ ವ್ಯವಸ್ಥೆ ಕಲ್ಪಿಸಿದ್ದಾರೆ.
ಕಡಬ ತಾಲೂಕಿನ ಗೋಳಿತೊಟ್ಟು, ನೆಲ್ಯಾಡಿ, ಕೌಕ್ರಾಡಿ, ನೂಜಿಬಾಳ್ತಿಲ, ಶಿರಾಡಿ, ಕೊಂಬಾರು, ಬಿಳಿನೆಲೆ, ಐತ್ತೂರು, ಕೊಣಾಜೆ, ಮರ್ದಾಳ, ಕುಟ್ರುಪ್ಪಾಡಿ, ಪೆರಾಬೆ, ರಾಮಕುಂಜ, ಕೊಯಿಲ, ಆಲಂಕಾರು, ಸವಣೂರು, ಬೆಳಂದೂರು, ಕಾಣಿಯೂರು, ಎಡಮಂಗಲ, ಬಳ್ಪ ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗಳ ಅಧಿಕಾರದ ಚುಕ್ಕಾಣಿ ಹಿಡಿಯಲು ವಿವಿಧ ಪಕ್ಷಗಳ ಬೆಂಬಲಿತರು ಕಸರತ್ತು ನಡೆಸುತ್ತಿದ್ದಾರೆ.













