ಮಾಜಿ ಡಬ್ಲ್ಯುಡಬ್ಲ್ಯುಇ ಸ್ಟಾರ್ ಜಾನ್ ಹ್ಯೂಬರ್ ನಿಧನ

ಹೊಸದಿಲ್ಲಿ: ಬ್ರಾಡೀ ಲೀ ಹೆಸರಿನಲ್ಲಿ ಆಲ್ ಎಲೈಟ್ ವ್ರೆಸ್ಲಿಂಗ್‌ನಲ್ಲಿ (ಎಇಡಬ್ಲು)ಸ್ಪರ್ಧಿಸುತ್ತಿದ್ದ ಕುಸ್ತಿಪಟು ಜಾನ್ ಹ್ಯೂಬರ್ ನಿಧನರಾಗಿದ್ದಾರೆ ಎಂದು ಅವರ ಪತ್ನಿ ಅಮಾಂಡಾ ಇನ್‌ಸ್ಟಾಗ್ರಾಮ್ ಮೂಲಕ ದೃಢಪಡಿಸಿದ್ದಾರೆ. ಹ್ಯೂಬರ್‌ಗೆ 41 ವರ್ಷ ವಯಸ್ಸಾಗಿತ್ತು.
ತನ್ನ ಪತಿ ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ. ಕೋವಿಡ್-19ಗೂ ಇದಕ್ಕೂ ಸಂಬಂಧವಿಲ್ಲ ಎಂದು ಅಮಾಂಡಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಹ್ಯೂಬರ್ ಈ ಹಿಂದೆ ಲ್ಯೂಕ್ ಹಾರ್ಪರ್ ಹೆಸರಿನಲಿ ಡಬ್ಲು ಡಬ್ಲು ಇನಲ್ಲಿ ಸ್ಪರ್ಧಿಸುತ್ತಿದ್ದರು. ಡಬ್ಲುಡಬ್ಲು ಇನಲ್ಲಿ 8 ವರ್ಷಗಳ ಯಶಸ್ವಿ ಪ್ರದರ್ಶನ ನೀಡಿದ್ದ ಹ್ಯೂಬರ್ ಮಾರ್ಚ್‌ನಲ್ಲಿ ಎಇಡಬ್ಲುಗೆ ಪಾದಾರ್ಪಣೆ ಮಾಡಿದ್ದರು.
ಜಾನ್ ಜನಪ್ರಿಯತೆಯ ತುತ್ತತುದಿಯಲ್ಲಿದ್ದರು. ವಿಶ್ವದಾದ್ಯಂತ ಕುಸ್ತಿ ಪ್ರಪಂಚದ ಮೇಲೆ ಪ್ರಭಾವ ಹೊಂದಿದ್ದರು. ಅವರು ತಮ್ಮ ಪತ್ನಿ,ಇಬ್ಬರು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ನಾವು ಅವರ ಸುಂದರ ಕುಟುಂಬಕ್ಕೆ ಪ್ರೀತಿ ಹಾಗೂ ಬೆಂಬಲ ನೀಡುತ್ತೇವೆ ಎಂದು ಎಇಡಬ್ಲು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಹ್ಯೂಬರ್ ನಿಧನಕ್ಕೆ ಎಇಡಬ್ಲು ಹಾಗೂ ಡಬ್ಲು ಡಬ್ಲು ಇ ತೀವ್ರ ಶೋಕ ವ್ಯಕ್ತಪಡಿಸಿವೆೆ. ಹ್ಯೂಬರ್ ಪತ್ನಿ ಹಾಗೂ ಇಬ್ಬರು ಮಕ್ಕಳಾದ ಬ್ರೋಡಿ ಹಾಗೂ ನೊಲನ್‌ರನ್ನು ಅಗಲಿದ್ದಾರೆ.





