ಪ್ರಧಾನಿ ಮನ್‌ಕೀ ಬಾತ್ ಭಾಷಣದ ವೇಳೆ ತಟ್ಟೆ ಬಾರಿಸಿದ ಪ್ರತಿಭಟನಾನಿರತ ರೈತರು

ಹೊಸದಿಲ್ಲಿ, ಡಿ.27: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು ರವಿವಾರ ಪ್ರಧಾನಿ ಮೋದಿಯ ಮನ್‌ಕಿ ಬಾತ್ ಕಾರ್ಯಕ್ರಮದ ಸಂದರ್ಭ ಪಾತ್ರೆ, ತಟ್ಟೆಗಳನ್ನು ಬಾರಿಸುವ ಮೂಲಕ ಪ್ರಧಾನಿ ಹಾಗೂ ಸರಕಾರದ ವಿರುದ್ಧ ತಮಗಿರುವ ಅತೃಪ್ತಿಯನ್ನು ಪ್ರದರ್ಶಿಸಿದರು ಎಂದು ವರದಿಯಾಗಿದೆ.
ದಿಲ್ಲಿ ಗಡಿಭಾಗದ ಸಿಂಘು, ಪಂಜಾಬ್‌ನ ಫರೀದ್‌ಕೋಟ್ ಹಾಗೂ ಹರ್ಯಾಣದ ರೋಹ್ಟಕ್‌ನಲ್ಲಿ ರೈತರು ಮನ್ ಕಿ ಬಾತ್ ಕಾರ್ಯಕ್ರಮದ ಸಂದರ್ಭ ತಟ್ಟೆ ಬಾರಿಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ರೈತರ ಮಾತುಗಳನ್ನು ಆಲಿಸದ ನಾಯಕನ ಮಾತುಗಳನ್ನು ಕೇಳಲು ತಮಗೆ ಇಷ್ಟವಿಲ್ಲ ಎಂದು ರೈತರು ಪ್ರತಿಕ್ರಿಯಿಸಿದ್ದಾರೆ.
ಮನ್‌ಕಿ ಬಾತ್ ಕಾರ್ಯಕ್ರಮದ ಸಂದರ್ಭ ಪ್ರತಿಭಟಿಸುವಂತೆ ‘ಸ್ವರಾಜ್ ಇಂಡಿಯಾ’ದ ಅಧ್ಯಕ್ಷ ಯೋಗೇಂದ್ರ ಯಾದವ್ ರೈತರಿಗೆ ಕರೆ ನೀಡಿದ್ದರು. ಡಿಸೆಂಬರ್ 27ರಂದು ರೇಡಿಯೋ ಮೂಲಕ ಪ್ರಧಾನಿಯವರ ಮನ್‌ಕಿ ಬಾತ್ ಆರಂಭವಾದೊಡನೆ ‘ ನಿಮ್ಮ ಮನ್‌ಕಿ ಬಾತ್ ಆಲಿಸಿ ಸುಸ್ತಾಗಿದೆ. ನಮ್ಮ ಮನ್‌ಕಿ ಬಾತ್ ಯಾವಾಗ ಕೇಳುತ್ತೀರಿ’ ಎಂದವರನ್ನು ಪ್ರಶ್ನಿಸಬೇಕು ಮತ್ತು ತಟ್ಟೆಗಳನ್ನು ಬಾರಿಸುವ ಮೂಲಕ ಮನ್‌ಕಿ ಬಾತ್‌ನ ಸ್ವರ ಕೇಳಿಸದಂತೆ ಮಾಡಬೇಕು’ ಎಂದು ಯಾದವ್ ಹೇಳಿದ್ದರು. ಕೊರೋನ ಸೋಂಕಿನ ಸಂದರ್ಭ ಸ್ವಾವಲಂಬನೆಗೆ ಒತ್ತುನೀಡುವಂತೆ ಮತ್ತು ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವಂತೆ ರವಿವಾರ ತಮ್ಮ ‘ ಮನ್‌ಕಿ ಬಾತ್ ಕಾರ್ಯಕ್ರಮ’ದ ಮೂಲಕ ಪ್ರಧಾನಿ ಮೋದಿ ಜನತೆಗೆ ಕರೆ ನೀಡಿದ್ದಾರೆ.







