ಹಳ್ಳಿ ಫೈಟ್‍ಗೆ ತೆರೆ: ಎರಡನೇ ಹಂತದ ಮತದಾನ ಶಾಂತಿಯುತ
ಡಿ.30ರ ಫಲಿತಾಂಶದತ್ತ ಎಲ್ಲರ ಚಿತ್ತ

ಬೆಂಗಳೂರು, ಡಿ. 27: ರಾಜ್ಯದ ಗ್ರಾಮೀಣ ಭಾಗದಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆಯು ಹೊಡೆದಾಟ-ಬಡಿದಾಟ, ಬ್ಯಾಲೆಟ್ ಪೇಪರ್ ಅದಲು-ಬದಲು, ಮತಪತ್ರದಲ್ಲಿನ ದೋಷ, ಬದಲಾದ ಚಿಹ್ನೆಗಳು, ಚುನಾವಣೆ ಮುಂದೂಡಿಕೆ, ಮತದಾನ ಬಹಿಷ್ಕಾರ, ಲಘುಲಾಠಿ ಪ್ರಹಾರ ಸೇರಿದಂತೆ ಹಲವು ಸಣ್ಣ-ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಶಾಂತಿಯುತವಾಗಿ ಮತದಾನ ಮುಕ್ತಾಯಗೊಂಡಿದೆ.
ಕೊರೋನ ಸೋಂಕಿನ ಆತಂಕದ ನಡುವೆಯೂ, ಮುಂಜಾನೆಯ ಮಾಗಿಯ ಚಳಿಯನ್ನೂ ಲೆಕ್ಕಿಸದೆ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಹಲವು ಕಡೆಗಳಲ್ಲಿ ಮುಂಜಾನೆಯೇ ಸಾಲು ಸಾಲಾಗಿ ಆಗಮಿಸಿ ಮತ ಚಲಾಯಿಸಿದರೆ, ಕೆಲವು ಕಡೆಗಳಲ್ಲಿ ಸೂರ್ಯ ನೆತ್ತಿಗೇರುವವರೆಗೂ ಮತಕೇಂದ್ರಗಳತ್ತ ಜನ ಸುಳಿದಿರಲಿಲ್ಲ. ಕೊರೋನ ಹಿನ್ನೆಲೆಯಲ್ಲಿ ಪ್ರತಿ ಮತದಾನದ ಕೇಂದ್ರದ ಬಳಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದ್ದು, ಮತಗಟ್ಟೆಗೆ ಬರುವ ಎಲ್ಲರಿಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಸ್ಯಾನಿಟೈಸರ್ ಬಳಸಿ ಕೈ ಸ್ವಚ್ಚಗೊಳಿಸಿಕೊಂಡು ಮತ ಹಾಕಲು ಅವಕಾಶ ನೀಡಲಾಯಿತು.
ಪ್ರತಿ ಮತಗಟ್ಟೆಯಲ್ಲು ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು. ಇಂದಿನ ಮತದಾನ ಸಂದರ್ಭದಲ್ಲೂ ಪ್ರತಿಮತಗಟ್ಟೆಗೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆದರೂ ಕೆಲವೆಡೆ ಘರ್ಷಣೆ, ಕೈ-ಕೈ ಮಿಲಾಯಿಸಿದ ಘಟನೆಯೂ ವರದಿಯಾಗಿದ್ದು, ಪೊಲೀಸರು ಗಲಾಟೆಯನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು.
ಘರ್ಷಣೆ: ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದ ಮತಗಟ್ಟೆ ಸಂಖ್ಯೆ 105ರಲ್ಲಿಮತ ಚಲಾಯಿಸಲು ಆಗಮಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೈ-ಕೈ ಮಿಲಾಯಿಸಿ ಜಗಳಕ್ಕೆ ನಿಂತರು. ಇದರಿಂದ ಮತದಾನ ಸುಮಾರು 2 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಗ್ರಾಮಕ್ಕೆ ಜಿಲ್ಲಾ ಎಸ್ಪಿ ಭೇಟಿ ನೀಡಿದ ನಂತರ ಮತದಾನ ಪುನರಾರಂಭಗೊಂಡಿತು.
ಬೆಂಗಳೂರು ನಗರ ಜಿಲ್ಲೆಯ ಮಹದೇವಪುರ ಕೇತ್ರದ ಬಿದರಹಳ್ಳಿಯ ಮತಗಟ್ಟೆಯಲ್ಲೂ ಕೈ-ಕೈ ಮಿಲಾಯಿಸಿದ ಘಟನೆ ನಡೆದಿದೆ. ಪೊಲೀಸರ ಮಧ್ಯ ಪ್ರವೇಶದಿಂದ ಎಲ್ಲವೂ ಸರಿದಾರಿಗೆ ಬಂದು ಮತದಾನ ಸುಗಮವಾಯಿತು. ಆನೇಕಲ್, ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ, ಚಾಮರಾಜನಗರದ ಹನೂರಿನ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಚುನಾವಣಾಕಾರಿಗಳು ಮತದಾನ ಸ್ಥಗಿತಗೊಳಿಸಿದ್ದರು.
ಕೆಆರ್ ಪುರ, ಕಾಡಾ, ಅಗ್ರಹಾರ ಬಿದರಹಳ್ಳಿ ಗ್ರಾಮ ಪಂಚಾಯಿತಿ ಮತಗಟ್ಟೆ ಬಳಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯ ಪ್ರವೇಶಿಸಿ ಲಾಠಿ ಪ್ರಹಾರ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಗದಗ ಜಿಲ್ಲೆ ರೋಣಾ ತಾಲ್ಲೂಕಿನ ಮೆಣಸಗಿ ಗ್ರಾಮದ ಮತಗಟ್ಟೆ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದ ಪರಿಣಾಮ ಚುನಾವಣಾಕಾರಿಗಳು ಮತದಾನ ಸ್ಥಗಿತಗೊಳಿಸಿದರು.
ಕದಂಪುರ ಗ್ರಾಪಂ ವಾರ್ಡ್ ನಂ.6ರಲ್ಲಿ ಸ್ರ್ಪಸಿದ್ದ ನಿರ್ಮಲಾ ಮಹಾಂತೇಶ್ ಅವರ ಚುನಾವಣಾ ಚಿಹ್ನೆ ಬಕೆಟ್ ಗುರುತಿಗೆ ಬದಲಾಗಿ ಅಲ್ಮೇರಾ ಮುದ್ರಣ ಆಗಿದ್ದು, ಚಿಹ್ನೆ ಅದಲು ಬದಲಾಗಿದ್ದರಿಂದ ಗೊಂದಲ ಉಂಟಾಗಿದ್ದರಿಂದ ಅಧಿಕಾರಿಗಳು ಚುನಾವಣೆಯನ್ನು ಮುಂದೂಡಿದರು.
ಮತದಾನ ಬಹಿಷ್ಕಾರ: ಉದ್ಯೋಗ ಭರವಸೆ ಈಡೇರಿಸದ ಕಾರಣ ವರುಣಾ ಕ್ಷೇತ್ರದ ಹಿಮ್ಮಾವು ಗ್ರಾಮದಲ್ಲಿ ಮತದಾರರು ಮತದಾನಕ್ಕೆ ಬರದೆ ಮತದಾನ ಬಹಿಷ್ಕರಿಸಿದ ಘಟನೆ ನಡೆಯಿತು. ನಂತರ ಅಭ್ಯರ್ಥಿಗಳು, ಊರಿನ ಮುಖಂಡರು ಗ್ರಾಮಸ್ಥರ ಮನವೊಲಿಸಿ ಮತದಾನ ಮಾಡಿಸಿದರು. ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು ಬದಲಾದ ಹಿನ್ನೆಲೆಯಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.
ಹನೂರು ತಾಲ್ಲೂಕಿನ ಕಡಲಸತ್ತಿ ಗ್ರಾಮಸ್ಥರು ಆನೆ ಅಟ್ಟಿಸಿಕೊಂಡು ಬಂದಾಗ ಬಿದ್ದು ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಮತದಾನವನ್ನು ಬಹಿಷ್ಕರಿಸಿದ್ದಾರೆ. ಹಲಗತಂಬಡಿ(65) ಎಂಬುವವರು ಆನೆ ಅಟ್ಟಿಸಿಕೊಂಡು ಬಂದಾಗ ಕಾಲುಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದರು. ಈವರೆಗೆ ಅವರಿಗೆ ಪರಿಹಾರ ಕೊಟ್ಟಿಲ್ಲ. ಪರಿಹಾರ ನೀಡುವವರೆಗೂ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಘಟನೆ ನಡೆದಿದೆ.
ಮತಕೇಂದ್ರಕ್ಕೆ ಬೀಗ ಜಡಿದ ಗ್ರಾಮಸ್ಥರು : ಉದ್ಯೋಗ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ವರುಣಾ ಕ್ಷೇತ್ರದ ಇಮ್ಮಾವು ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿ ಗ್ರಾಮಸ್ಥರು ಮತಕೇಂದ್ರಕ್ಕೆ ಬೀಗ ಜಡಿದಿದ್ದಾರೆ. ಏಷ್ಯನ್ ಪೇಂಟ್ಸ್ ನಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರೂ ಯಾವೊಬ್ಬರೂ ಇದನ್ನು ಈಡೇರಿಸಿಲ್ಲದ ಕಾರಣ ಗ್ರಾಮಸ್ಥರು ಇಂದು ಮತದಾನ ನಡೆಯಬೇಕಿದ್ದ ಶಾಲೆಗೆ ಬೀಗ ಹಾಕಿ ಮತದಾನ ಸ್ಥಗಿತಗೊಳಿಸಿದ್ದರು.
ಚಿಹ್ನೆ ಅದಲು-ಬದಲು, ಮತಪತ್ರ ದೋಷ: ಬೆಳಗಾವಿಯ ರಾಮದುರ್ಗ ತಾಲ್ಲೂಕಿನ ಕದಂಪುರ ಗ್ರಾಮ ಪಂಚಾಯಿತಿಯಲ್ಲಿ ಬ್ಯಾಲೆಟ್ ಪೇಪರ್ ಎಡವಟ್ಟಿನಿಂದ ಚುನಾವಣೆಯನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ಸೋಮಗುದ್ದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಮದುರೈ ಮತ್ತು ಸಾಣಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮ ಹಾಗೂ ಮಹದೇವಪುರ ಗ್ರಾಮದಲ್ಲಿ ಮತಪತ್ರದಲ್ಲಿ ದೋಷ ಕಂಡು ಬಂದ ಕಾರಣ ತಾತ್ಕಾಲಿಕವಾಗಿ ಮತದಾನವನ್ನು ಸ್ಥಗಿತಗೊಳಿಸಿ ಮತಪತ್ರಗಳನ್ನು ಮರು ಮುದ್ರಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವಾರ್ಡ್ 3 ಮತ್ತು 4 ರಲ್ಲಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಕಲಾದೇವಿ ಗ್ರಾಮ ಪಂಚಾಯ್ತಿಯ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು-ಬದಲಾಗಿ ಗೊಂದಲ ಸೃಷ್ಟಿಯಾದ ಕಾರಣ ಕೆಲಕಾಲ ಮತದಾನ ಸ್ಥಗಿತಗೊಂಡಿತು. ಬೆಳಗಾವಿಯ ರಾಮದುರ್ಗ ತಾಲ್ಲೂಕಿನ ಕದಂಪುರ ವಾರ್ಡ್ 6ರಲ್ಲಿ ಅಭ್ಯರ್ಥಿಯ ಚಿಹ್ನೆ ಬದಲಾದ ಕಾರಣ ಚುನಾವಣೆಯನ್ನು ನಾಳೆಗೆ ಮುಂದೂಡಲಾಗಿದೆ.
ರಾಜಕೀಯ ನಾಯಕರಿಂದ ಮತ ಚಲಾವಣೆ: ವಿಪಕ್ಷ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಲಕ್ಮಣ ಸವದಿ ಹಾಗೂ ಗೋವಿಂದ ಕಾರಜೋಳ ತಮ್ಮ ಮತಕ್ಷೇತ್ರದಲ್ಲಿ ಕುಟುಂಬ ಸದಸ್ಯರೊಂದಿಗೆ ಬಂದು ಮತ ಚಲಾಯಿಸಿದರು. ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಶಾಸಕ ಹರೀಶ್ ಪೂಂಜ, ಶಾಸಕ ಎಸ್.ಎಂ.ಅಂಗಾರ, ಸುಕುಮಾರಶೆಟ್ಟಿ ಸೇರಿದಂತೆ ಅನೇಕ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ಶಾಸಕರು, ಸಚಿವರು ಸೇರಿದಂತೆ ಜನಪ್ರತಿನಿಧಿಗಳು ತಮ್ಮ ಹಕ್ಕನ್ನು ಚಲಾಯಿಸಿದರು.
ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಮಂಡ್ಯ, ಚಾಮರಾಜನಗರ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಿಳಿದುಬಂದಿದೆ.
ಬಳ್ಳಾರಿ ಜಿಲ್ಲೆಯ ಕಾನಾಹೊಸಳ್ಳಿ ಸಮೀಪದ ಗುಂಡುಮುಣುಗು ಗ್ರಾಮದ ಮತಗಟ್ಟೆ ಸಂಖ್ಯೆ 47 ರಲ್ಲಿ ಎರಡೂ ಕೈಗಳಿಲ್ಲದ ಯುವತಿ ಲಕ್ಷ್ಮೀ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಿದರು. ಎರಡೂ ಕೈಗಳು ಇಲ್ಲದ ಕಾರಣ ಕಾಲಿನ ಬೆರಳಿಗೆ ಮತಗಟ್ಟೆ ಅಧಿಕಾರಿಗಳು ಶಾಹಿ ಹಾಕಿದರು. ಎರಡೂ ಕೈಗಳು ಇಲ್ಲದಿದ್ದರೂ ಸಹ ಲಕ್ಷ್ಮೀ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಮತದಾನ ಜಾಗೃತಿ ರಾಯಭಾರಿಯಾಗಿ ಯುವತಿ ಕೆಲಸ ಮಾಡಿದ್ದರು.
ಡಿ.30 ಕ್ಕೆ ಮತ ಎಣಿಕೆ
ರಾಜ್ಯದಲ್ಲಿ ಡಿ.22 ಹಾಗೂ ಡಿ.27 ರಂದು ಎರಡು ಹಂತದಲ್ಲಿ 226 ತಾಲ್ಲೂಕುಗಳ, 5,728 ಗ್ರಾಮ ಪಂಚಾಯತ್‍ಗಳ, 82,616 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 2,22,814 ಅಭ್ಯರ್ಥಿಗಳು ಭವಿಷ್ಯ ಮತ ಪೆಟ್ಟಿಗೆಗಳಲ್ಲಿ ಭದ್ರವಾಗಿಡಲಾಗಿದೆ. ಆಯಾ ತಾಲ್ಲೂಕುಗಳಲ್ಲಿ ನಿಗದಿಪಡಿಸಿರುವ ಮತ ಎಣಿಕೆ ಕೇಂದ್ರಗಳಲ್ಲಿ ಮತ ಪೆಟ್ಟಿಗೆಗಳನ್ನಿಟ್ಟಿದ್ದು, ಸೂಕ್ತ ಭದ್ರತೆಯನ್ನು ಕಲ್ಪಿಸಲಾಗಿದೆ. ಡಿ.30 ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಎರಡೂ ಹಂತದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ.






.jpg)


