ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರಿಡಲು ನಕಾರ: ರಾಜ್ಯ ಸರ್ಕಾರದ ವಿರುದ್ಧ ಶಂಕರ್ ಬಿದರಿ ಕಿಡಿ

ಮಧುಕರ್ ಶೆಟ್ಟಿ
ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದಲ್ಲಿರುವ ವರ್ತೂರು ಕೋಡಿ ವೃತ್ತಕ್ಕೆ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದ ದಿವಂಗತ ಮಧುಕರ್ ಶೆಟ್ಟಿಯವರ ಹೆಸರಿಡಬೇಕು ಎಂಬ ಪ್ರಸ್ತಾವವನ್ನು ರಾಜ್ಯ ಸರಕಾರ ತಿರಸ್ಕರಿಸಿತ್ತು. ಈ ಕುರಿತು ಜನರಿಂದ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ರಾಜ್ಯದ ಮಾಜಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಶಂಕರ್ ಬಿದರಿ ಕೂಡಾ ರಾಜ್ಯ ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದಿರುವ ಅವರು, “ನನಗಿವತ್ತು ತುಂಬಾ ನೋವಾಗುತ್ತಿದೆ. ಓರ್ವ ನಿಷ್ಠಾವಂತ ಮತ್ತು ಪ್ರಾಮಾಣಿಕ ಹಾಗೂ ತನ್ನ ವೃತ್ತಿ ಜೀವನದುದ್ದಕ್ಕೂ ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಬಂದ ಅಧಿಕಾರಿಯ ಸ್ಮರಣೆಗಾಗಿ ವೃತ್ತಕ್ಕೆ ಅವರ ಹೆಸರಿಡುವ ಪ್ರಸ್ತಾವವನ್ನು ತಿರಸ್ಕರಿಸಿರುವದಕ್ಕೆ ಕಾರಣ ತಿಳಿಯುತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
“ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರಿಡುವುದನ್ನು ಸರಕಾರ ತಿರಸ್ಕರಿಸಿರುವುದು ಅವರಿಗೆ ಮಾಡಿದ ಅವಮಾನವಾಗಿದೆ. ಕರ್ನಾಟಕವು ಹಲವಾರು ಮುಖ್ಯಮಂತ್ರಿಗಳನ್ನು ಕಂಡಿದೆ. ಕಡಿದಾಳ್ ಮಂಜಪ್ಪ, ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್.ಆರ್ ಕಂಠಿ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಮುಂತಾದವರೆಲ್ಲಾ ನಿಷ್ಠಾವಂತ ಅಧಿಕಾರಿಗಳನ್ನು ಗೌರವಿಸುತ್ತಿದ್ದರು. ಹೆಚ್.ಡಿ ದೇವೇಗೌಡ ಮುಖ್ಯಮಂತ್ರಿಯಾಗಿದ್ದ ವೇಳೆ ಟ್ರಾಫಿಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟ ಟ್ರಾಫಿಕ್ ಪೇದೆಯ ಹೆಸರನ್ನು ಕೂಡಲೇ ವೃತ್ತವೊಂದಕ್ಕೆ ನಾಮಕರಣ ಮಾಡಿದ್ದರು. ಟ್ರಾಫಿಕ್ ಪೇದೆ ತಿಮ್ಮಯ್ಯರ ದೇಹವನ್ನು ಅಂತಿಮ ಸಂಸ್ಕಾರ ಮಾಡುವ ಮೊದಲೇ ವೃತ್ತಕ್ಕೆ ಹೆಸರಿಡಲಾಗಿತ್ತು.”
“ಮಧುಕರ್ ಶೆಟ್ಟಿ ಯಾವ ಲಾಭಿಗೂ ಮಣಿಯದ ವ್ಯಕ್ತಿ. ಯಾವ ರಾಜಕಾರಣಿಗೂ ಮಣಿಯುತ್ತಿರಲಿಲ್ಲ; ಬಂಟ ಸಮುದಾಯದಿಂದ ಅವರು ಬೆಂಬಲ ಪಡೆಯದೇ ಇದ್ದರೂ, ಇಂದಿಗೂ ಅವರು ಬಂಟರಿಗೆ ಹೆಮ್ಮೆಯಾಗಿದ್ದಾರೆ. ಮಧುಕರ್ ಶೆಟ್ಟಿ ನನ್ನ ಮಗನಿದ್ದಂತೆ. ಅವರು ಯಾರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಿದ್ದರೋ ಅವರೇ ಈಗ ಅಧಿಕಾರದಲ್ಲಿದ್ದಾರೆ. ಉತ್ತಮ ವ್ಯಕ್ತಿಗಳು ಆಡಳಿತಕ್ಕೆ ಬಂದಾಗ ಮಧುಕರ ಶೆಟ್ಟಿಯವರಿಗೆ ಗೌರವ ಸಲ್ಲಿಸಬಹುದು ಎಂದು ತಮ್ಮ ಪೇಸ್ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
2019ರಲ್ಲಿ ಮಧುಕರ್ ಶೆಟ್ಟಿಯವರ ಹೆಸರನ್ನು ವೃತ್ತಕ್ಕೆ ಇಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಬಳಿಕ ವೈಟ್ ಫೀಲ್ಡಿನ ಆಗಿನ ಡಿಸಿಪಿ ಅಬ್ದುಲ್ ಅಹದ್ ಹಾಗೂ ಇನ್ನಿತರ ಸಹೋದ್ಯೋಗಿಗಳು ಮನವಿ ಮಾಡಿದ ಬಳಿಕ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರಿಡುವುದಾಗಿ ಬಿಬಿಎಂಪಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಹಾಗೂ ಸಹಚರರು ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ಮಧುಕರ್ ಶೆಟ್ಟಿ ಬಯಲು ಮಾಡಿದ್ದರು. ಈ ಪ್ರಕರಣವು ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವಂತೆ ಮಾಡಿತ್ತು. ಮಧುಕರ್ ಶೆಟ್ಟಿಯವರು ಕನ್ನಡದ ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಪುತ್ರರಾಗಿದ್ದು, 2018ರಲ್ಲಿ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿದ್ದರು.







