ರೈತರ ಪ್ರತಿಭಟನೆಯು 1907ರ ‘ಪಗಡಿ ಸಂಭಾಲ್ ಜಟ್ಟಾ’ ಆಂದೋಲನವನ್ನು ನೆನಪಿಸುತ್ತಿದೆ: ಭಗತ್ ಸಿಂಗ್ ಸಂಬಂಧಿ

ಹೊಸದಿಲ್ಲಿ, ಡಿ.27: ರೈತರು ವಿದ್ಯಾವಂತರಾಗಿದ್ದಾರೆ ಮತ್ತು ತಮ್ಮ ಹಕ್ಕುಗಳ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ,ಅವರನ್ನು ಯಾರೂ ದಾರಿ ತಪ್ಪಿಸಿಲ್ಲ ಎಂದು ದಿಲ್ಲಿಯ ಸಿಂಘು ಗಡಿಯಲ್ಲಿ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸುತ್ತಿರುವ ಸಾವಿರಾರು ರೈತರ ಜೊತೆ ಕೈಜೋಡಿಸಿರುವ ಅಭಯ ಸಿಂಗ್ ಸಂಧು (64) ಹೇಳಿದ್ದಾರೆ. ಚಂಡಿಗಡದಲ್ಲಿ ತೋಟವನ್ನು ಹೊಂದಿರುವ ಸಂಧು ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ ಸೋದರನ ಪುತ್ರರಾಗಿದ್ದು,ಕಳೆದ ಹತ್ತು ದಿನಗಳಿಂದಲೂ ತನ್ನ ಪತ್ನಿಯೊಂದಿಗೆ ಸಿಂಘು ಗಡಿಯಲ್ಲಿ ಬೀಡುಬಿಟ್ಟಿದ್ದಾರೆ.
ಪ್ರತಿಭಟನಾಕಾರರನ್ನು ದಾರಿ ತಪ್ಪಿಸಲಾಗಿದೆ ಎಂಬ ಸರಕಾರದ ಹೇಳಿಕೆಯ ಕುರಿತು ಪ್ರಶ್ನೆಗೆ ಸಂಧು,ಈ ರೈತರು ಹಿಂದಿನ ಕಾಲದ ಅವಿದ್ಯಾವಂತ ರೈತರಂತಲ್ಲ. ಇವರೆಲ್ಲ ವಿದ್ಯಾವಂತರಾಗಿದ್ದು ತಮ್ಮ ಹಕ್ಕುಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅವರನ್ನು ಯಾರೂ ದಾರಿ ತಪ್ಪಿಸಿಲ್ಲ ಎಂದು ಉತ್ತರಿಸಿದರು.
ಈ ಪ್ರತಿಭಟನೆಯು ಬ್ರಿಟಷರು ಜಾರಿಗೆ ತಂದಿದ್ದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ತನ್ನ ಅಜ್ಜ ಹಾಗೂ ಭಗತ್ ಸಿಂಗರ ಚಿಕ್ಕಪ್ಪ ಅಜಿತ ಸಿಂಗ್ ನೇತೃತ್ವದಲ್ಲಿ 1906-07ರಲ್ಲಿ ನಡೆದಿದ್ದ ‘ಪಗಡಿ ಸಂಭಾಲ್ ಜಟ್ಟಾ ’ಆಂದೋಲನವನ್ನು ಪ್ರತಿಬಿಂಬಿಸುತ್ತಿದೆ ಎಂದು ಸಂಧು ತಿಳಿಸಿದರು.
‘ಕ್ರಾಂತಿ ನಮ್ಮ ಕುಟುಂಬದ ಪರಂಪರೆಯಲ್ಲಿ ಸೇರಿದೆ. 1906ರಲ್ಲಿ ಈಗಿನಂತೆ ಬ್ರಿಟಿಷರೂ ರೈತರಿಗೆ ಹಾನಿಕರವಾಗಿದ್ದ ಕೃಷಿ ಸುಧಾರಣೆಗಳನ್ನು ತಂದಿದ್ದರು. ಆಗ ಕಾನೂನುಗಳು ರದ್ದುಗೊಳ್ಳುವಂತಾಗಲು ನನ್ನ ಅಜ್ಜ ಅಜಿತ ಸಿಂಗ್ ಅವರು ಲಾಲಾ ಲಜಪತ್ ರಾಯ್ ಮತ್ತು ಇತರರ ಜೊತೆ ಸೇರಿಕೊಂಡು ಪಗಡಿ ಸಂಭಾಲ್ ಜಟ್ಟಾ ಆಂದೋಲನವನ್ನು ಆರಂಭಿಸಿದ್ದರು. ಈಗ ಈ ಮೂರು ಹೊಸ ಕೃಷಿ ಕಾನೂನುಗಳೊಂದಿಗೆ ಅದು ಪುನರಾವರ್ತನೆಯಾಗುತ್ತಿದೆ’ ಎಂದರು.







