ರಾಷ್ಟ್ರೀಯ ಮಾಜಿ ಕಬಡ್ಡಿ ಆಟಗಾರ ರತ್ನಾಕರ ಪುತ್ರನ್ ನಿಧನ

ಮಂಗಳೂರು, ಡಿ.27: ರಾಷ್ಟ್ರೀಯ ಮಾಜಿ ಕಬಡ್ಡಿ ಆಟಗಾರ, ಶಿಕ್ಷಣ ಪ್ರೇಮಿ, ಸಮಾಜ ಸೇವಕ ರತ್ನಾಕರ ಪುತ್ರನ್(70) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಗರದ ಬೊಕ್ಕಪಟ್ಣದ ದೇವಪ್ಪ ಕರ್ಕೇರ ಮತ್ತು ಸೇಸಮ್ಮ ಪುತ್ರನ್ ದಂಪತಿಯ ಪುತ್ರನಾಗಿ ಜನಿಸಿದ್ದ ರತ್ನಾಕರ ಪುತ್ರನ್ ಬೊಕ್ಕಪಟ್ಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಬಳಿಕ ನಗರದ ಡೊಂಗರಕೇರಿಯ ಕೆನರಾ ಮೈನ್‌ನಲ್ಲಿ ಪ್ರೌಢಶಿಕ್ಷಣ ಮತ್ತು ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿದ್ದರು.
ಎಳವೆಯಿಂದಲೇ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ರತ್ನಾಕರ ಪುತ್ರನ್ ಈ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದರು. ಕಬಡ್ಡಿಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ರತ್ನಾಕರ ಪುತ್ರನ್ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರಾಗಿದ್ದರು. ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಗಳಲ್ಲಿ 1985-86ರಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದ ಪ್ರಮುಖ ಆಟಗಾರರಾಗಿದ್ದರು. ಕಬಡ್ಡಿಯ ಜೊತೆಗೆ ಉತ್ತಮ ಕ್ರಿಕೆಟ್ ಪಟುವೂ ಆಗಿದ್ದರು.
ಕರ್ನಾಟಕ ರಾಜ್ಯ ಅಮೆಚೂರು ರಾಷ್ಟ್ರೀಯ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷರಾಗಿ, ದ.ಕ.ಜಿಲ್ಲಾ ಕಬಡ್ಡಿ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದರು. ಫೆಡರೇಶನ್ ಕಪ್ ಕಬಡ್ಡಿ ಪಂದ್ಯಾಟ, ರಾಷ್ಟ್ರೀಯ ಸಬ್ ಜೂನಿಯರ್ ಕಬಡ್ಡಿ ಪಂದ್ಯಾಟ, ಸೌತ್ ರೆನ್ ರಾಷ್ಟ್ರೀಯ ಕಬಡ್ಡಿ ಪಂದ್ಯಾಟ, ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಮಟ್ಟದ ಪುರುಷರ, ಮಹಿಳೆಯರ ಕಬಡ್ಡಿ ಪಂದ್ಯಾಟ ಸೇರಿದಂತೆ ಹ್ಯಾಂಡ್ ಬಾಲ್ ಅಸೋಸಿಯೇಶನ್‌ನ ಜಿಲ್ಲಾ ಅಧ್ಯಕ್ಷ ಮತ್ತು ರಾಜ್ಯ ಉಪಾಧ್ಯಕ್ಷರಾಗಿದ್ದರು.
ಕ್ರೀಡಾಕೂಟಗಳು, ಸಾಂಸ್ಕೃತಿಕ ಕೂಟಗಳನ್ನು ಸಂಘಟಿಸುವುದರಲ್ಲಿ ನಿಪುಣರಾಗಿದ್ದ ಅವರು 2014ರಲ್ಲಿ ಮಂಗಳೂರಿನಲ್ಲಿ ಸೌತ್ ರೆನ್ ಸೀನಿಯರ್ ನ್ಯಾಷನಲ್ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್ ಸ್ಪರ್ಧಾಕೂಟವನ್ನು ಆಯೋಜಿಸಿದ್ದರು. ಬೀಚ್ ಕಬಡ್ಡಿ ಟೂರ್ನಮೆಂಟ್ ಎಂಬ ಪರಿಕಲ್ಪನೆಯ ಕಬಡ್ಡಿ ಪಂದ್ಯಾಟವನ್ನು ಆಯೋಜನೆ ಮಾಡಿರುವುದು ರತ್ನಾಕರ ಪುತ್ರನ್ ಅವರ ಹೆಗ್ಗಳಿಕೆಯಾಗಿತ್ತು.
ಅಲ್ ಇಂಡಿಯಾ ಬೀಚ್ ಕಬಡ್ಡಿ ಸಂಸ್ಥೆಯ ಸಂಸ್ಥಾಪಕ ಸದಸ್ಯರು, ಅಲ್ ಇಂಡಿಯಾ ಬೀಚ್ ಕಬಡ್ಡಿ ಸಂಸ್ಥೆಯ ಪದಾಧಿಕಾರಿಯಾಗಿದ್ದರು. ಮಂಗಳೂರು ವಿವಿಯ ಮೊದಲ ಕಬಡ್ಡಿ ತರಬೇತುದಾರರಾಗಿ ತಂಡಕ್ಕೆ ಅಲ್ ಇಂಡಿಯಾ ರನ್ನರ್ ಆಪ್ ಪ್ರಶಸ್ತಿ ಪಡೆಯಲು ನೆರವಾಗಿದ್ದರು. ಎನ್‌ಎಂಪಿಟಿ ತಂಡದಲ್ಲಿ ಕಬಡ್ಡಿ ಕೋಚ್ ಆಗಿದ್ದ ಸಮಯದಲ್ಲಿ ತಂಡ ಅಲ್ ಇಂಡಿಯಾ ಮೇಜರ್ ಪೋರ್ಟ್ ಚಾಂಪಿಯನ್ ಗೆಲ್ಲುವುದರಲ್ಲೂ ಅವರು ಕೆಲಸ ಮಾಡಿದ್ದರು.
ಮಹಿಳಾ ಸಬಲೀಕರಣದ ಬಗ್ಗೆಯೂ ಸಾಕಷ್ಟು ಚಿಂತನೆಯನ್ನು ಹೊಂದಿದ್ದ ರತ್ನಾಕರ್ ಪುತ್ರನ್ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಅಪಾರ ಆಸಕ್ತಿ ಹೊಂದಿದ್ದರು. ನಾಟಕಗಳಲ್ಲೂ ಮನೋಜ್ಞವಾಗಿ ಅಭಿನಯಿಸುತ್ತಿದ್ದರು.
ತಾಯಿ ಸೇಸಮ್ಮ ಪುತ್ರನ್ ಮತ್ತು ಅಗಲಿದ ಸಹೋದರ ಮಾಧವ ಪುತ್ರನ್ ಅವರ ನೆನಪಿನಲ್ಲಿ ಫೌಂಡೇಷನ್ ಸ್ಥಾಪಿಸಿದ್ದರು. ಆ ಮೂಲಕ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ತಾನು ಕಲಿತ ಬೊಕ್ಕಪಟ್ಣ ಶಾಲೆಯನ್ನು ಉಳಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪುಸ್ತಕ ವಿತರಣೆ ಇತ್ಯಾದಿಗಳನ್ನು ಮಾಡುತ್ತಿದ್ದರು.







