ಟೋಲ್ ರಹಿತ ವಾಹನ ಸಂಚಾರವನ್ನು ಅನಿರ್ದಿಷ್ಟಾವಧಿ ವಿಸ್ತರಿಸಿದ ರೈತ ಪ್ರತಿಭಟನಾಕಾರರು

ಕರ್ನಾಲ್, ಡಿ. 27: ಪ್ರಯಾಣಿಕರು ಟೋಲ್ ಪ್ಲಾಝಾದ ಮೂಲಕ ಉಚಿತವಾಗಿ ಹಾದು ಹೋಗಲು ರಾಜ್ಯದಲ್ಲಿರುವ ಟೋಲ್ ಪ್ಲಾಝಗಳನ್ನು ಅನಿರ್ದಿಷ್ಟಾವಧಿ ತೆರೆದಿರಿಸಲು ಹರ್ಯಾಣದ ರೈತರ ಸಂಘಟನೆಗಳು ನಿರ್ಧರಿಸಿವೆ.
ಮೂರು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವ ಉದ್ದೇಶದಿಂದ ರೈತ ಸಂಘಟನೆಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ.
ಡಿಸೆಂಬರ್ 25ರಿಂದ 27ರ ವರೆಗೆ ಮೂರು ದಿನಗಳ ಕಾಲ ಟೋಲ್ ಪ್ಲಾಝಾಗಳು ತೆರೆದಿರಲಿವೆ ಎಂದು ಈ ಹಿಂದೆ ರೈತ ಒಕ್ಕೂಟದ ನಾಯಕರು ಹೇಳಿದ್ದರು. ಆದರೆ, ಶನಿವಾರ ತಡರಾತ್ರಿ ನಡೆದ ಸಭೆಯಲ್ಲಿ ರೈತ ನಾಯಕರು, ತಮ್ಮ ಬೇಡಿಕೆಗಳನ್ನು ಕೇಂದ್ರ ಸರಕಾರ ಸ್ವೀಕರಿಸುವ ವರೆಗೆ ಪ್ರಯಾಣಿಕರ ಮೇಲೆ ಟೋಲ್ ಕಂಪೆನಿಗಳು ಶುಲ್ಕ ವಿಧಿಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
‘‘ನಾವು ಹಲವು ರೈತರನ್ನು ಹಾಗೂ ರೈತರ ಒಕ್ಕೂಟಗಳ ಪ್ರತಿನಿಧಿಗಳನ್ನು ಭೇಟಿಯಾದೆವು. ಟೋಲ್ ಪ್ಲಾಝಾದಲ್ಲಿ ಪ್ರಯಾಣಿಕರ ಮೇಲೆ ಶುಲ್ಕ ವಿಧಿಸುವುದಕ್ಕೆ ಅನಿರ್ದಿಷ್ಟಾವಧಿ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ’’ ಎಂದು ಭಾರತೀಯ ಕಿಸಾನ್ ಒಕ್ಕೂಟದ ಅಧ್ಯಕ್ಷ ಗುರ್ನಾಮ್ ಸಿಂಗ್ ಚರುನಿ ಹೇಳಿದ್ದಾರೆ.
ದಿಲ್ಲಿ ಗಡಿಯಲ್ಲಿ ರೈತರ ಪ್ರತಿಭಟನೆ ಅಂತ್ಯಗೊಳ್ಳುವ ವರೆಗೆ ರಾಜ್ಯದ ಎಲ್ಲಾ ಟೋಲ್‌ಪ್ಲಾಝಾಗಳಲ್ಲಿ ರೈತರು ಪ್ರತಿಭಟನೆ ಮುಂದುವರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 25ರಂದು ಬೆಳಗ್ಗೆ ಪ್ರತಿಭಟನೆ ನಡೆಸುತ್ತಿರುವ ರೈತರು ಟೋಲ್ ಪ್ಲಾಝಾದಲ್ಲಿ ಸೇರಿ ಟೋಲ್ ಸ್ವೀಕರಿಸದಂತೆ ಅಲ್ಲಿನ ಉದ್ಯೋಗಿಗಳ ಮೇಲೆ ಒತ್ತಡ ಹೇರಿದ್ದರು. ವಾಹನಗಳು ಉಚಿತವಾಗಿ ಸಂಚರಿಸಲು ಟೋಲ್‌ಗೇಟ್‌ನಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದರು.







