ದಕ್ಷಿಣ ದಿಲ್ಲಿ ನಗರಪಾಲಿಕೆ: ಹೋಟೆಲ್‌ಗಳು ಮಾಂಸಾಹಾರದ ಮಾಹಿತಿ ನೀಡುವಂತೆ ಸೂಚಿಸುವ ಪ್ರಸ್ತಾವನೆಗೆ ಅನುಮೋದನೆ
ಹೊಸದಿಲ್ಲಿ, ಡಿ.27: ದಕ್ಷಿಣ ದಿಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲಾ ರೆಸ್ಟಾರೆಂಟ್‌ಗಳು ಹಾಗೂ ಮಾಂಸದಂಗಡಿಗಳು ತಾವು ಮಾರಾಟ ಮಾಡುವ ಮಾಂಸ (ಹಲಾಲ್ ಅಥವಾ ಝಟ್ಕಾ)ದ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸಬೇಕು ಎಂಬ ಪ್ರಸ್ತಾವನೆಯನ್ನು ನಗರಪಾಲಿಕೆಯ ಸ್ಥಾಯಿ ಸಮಿತಿ ಅನುಮೋದಿಸಿದೆ.
ದಕ್ಷಿಣ ದಿಲ್ಲಿ ನಗರಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹಲಾಲ್ ಮಾಂಸ ಎಂದರೆ ಪ್ರವಾದಿ ಮುಹಮ್ಮದ್ ಅವರ ಬೋಧನೆಯಂತೆ, ಖುರಾನ್‌ನ ಮಾರ್ಗಸೂಚಿಯಲ್ಲಿ ತಿಳಿಸಿದ ಪ್ರಕಾರ ಸಿದ್ಧಪಡಿಸಿದ ಮಾಂಸ. ಝಟ್ಕಾ ಎಂದರೆ ಕತ್ತಿ ಅಥವಾ ಕೊಡಲಿಯ ಒಂದೇ ಏಟಿನಿಂದ ವಧಿಸಲ್ಪಟ್ಟ ಪ್ರಾಣಿಯ ಮಾಂಸವಾಗಿದೆ. ಹಲಾಲ್ ಖಾದ್ಯವನ್ನು ತಿನ್ನುವುದು ಸಿಖ್ ಮತ್ತು ಹಿಂದು ಧರ್ಮದಲ್ಲಿ ನಿಷೇಧಿಸಲಾಗಿದೆ.
ಆದ್ದರಿಂದ ಮಾಂಸಾಹಾರದ ಬಗ್ಗೆ ವಿವರ ಪ್ರದರ್ಶಿಸುವಂತೆ ಎಲ್ಲಾ ಹೋಟೆಲ್ ಮತ್ತು ಮಾಂಸದಂಗಡಿಗೆ ಸೂಚಿಸಲಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಈ ಪ್ರಸ್ತಾವನೆಯನ್ನು ಅಂತಿಮ ಅನುಮೋದನೆಗಾಗಿ ದಕ್ಷಿಣ ದಿಲ್ಲಿ ಮಹಾನಗರಪಾಲಿಕೆಗೆ ರವಾನಿಸಲಾಗುವುದು. ದಕ್ಷಿಣ ದಿಲ್ಲಿ ನಗರಪಾಲಿಕೆ ವ್ಯಾಪ್ತಿಯಡಿ ಬರುವ 104 ವಾರ್ಡ್‌ಗಳಲ್ಲಿ ಸಾವಿರಾರು ರೆಸ್ಟಾರೆಂಟ್ ಹಾಗೂ ಅಂಗಡಿಗಳಿವೆ. ಇದರಲ್ಲಿ ಸುಮಾರು 90%ದಷ್ಟು ಅಂಗಡಿ, ಹೋಟೆಲ್‌ಗಳಲ್ಲಿ ಮಾಂಸ ಮಾರಾಟ ಮಾಡಲಾಗುತ್ತಿದೆ.
ಓರ್ವ ವ್ಯಕ್ತಿ ಝಟ್ಕಾ ಮಾಂಸ ಅಪೇಕ್ಷಿಸಿದ್ದರೂ ಆತನಿಗೆ ಹಲಾಲ್ ಮಾಂಸ ಒದಗಿಸಿದರೆ ಆತನಿಗೆ ಅಸಮಾಧಾನ ಆಗಬಹುದು. ಅಲ್ಲದೆ ಮಾಂಸದ ಅಂಗಡಿಗಳು ಮತ್ತು ಹೋಟೆಲ್‌ಗಳು ಲೈಸೆನ್ಸ್ ನಿಯಮ ಉಲ್ಲಂಘಿಸುವುದನ್ನು ತಡೆಯುವ ಉದ್ದೇಶದಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ರಾಜದೂತ್ ಗೆಹ್ಲೋಟ್ ಹೇಳಿದ್ದಾರೆ. ಇದೇ ರೀತಿಯ ಪ್ರಸ್ತಾವನೆಯನ್ನು 2018ರಲ್ಲಿ ಪೂರ್ವ ದಿಲ್ಲಿ ನಗರಪಾಲಿಕೆಯೂ ಅಂಗೀಕರಿಸಿತ್ತು.







