ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಅಸ್ಮಿತೆ: ಮರುಳ ಸಿದ್ದಪ್ಪ
ಕನ್ನಡ ವಿವಿ ಉಳಿಸಿ ಅಭಿಯಾನದಲ್ಲಿ ಹಿರಿಯ ಸಾಹಿತಿ, ಚಿಂತಕರು ಭಾಗಿ
ಬೆಂಗಳೂರು, ಡಿ. 27: ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಅಸ್ಮಿತೆಯ ಸಂಕೇತವಾಗಿದೆ. ಅದನ್ನು ಬೆಳೆಸುವುದು ರಾಜ್ಯ ಸರಕಾರದ ಆದ್ಯತೆಯಾಗಬೇಕೆಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಒತ್ತಾಯಿಸಿದ್ದಾರೆ.
ರವಿವಾರ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಾಮಾಜಿಕ ಜಾಲತಾಣದಲ್ಲಿ ಹಮ್ಮಿಕೊಂಡಿರುವ ಕನ್ನಡವಿವಿ ಉಳಿಸಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಂಸ್ಕೃತಕ್ಕಿಲ್ಲದ ಅನುದಾನದ ಕೊರತೆ ಕನ್ನಡಕ್ಕಿದೆಯೆಂದರೆ ಕನ್ನಡಿಗರಾದ ನಾವು ತಲೆತಗ್ಗಿಸಬೇಕು. ಕನ್ನಡಪರ ಶಕ್ತಿಗಳೆಲ್ಲಾ ಒಗ್ಗೂಡಿ ಈ ಅಪಮಾನಕ್ಕೆ ಕಾರಣರಾದವರಿಗೆ ತಕ್ಕ ಪಾಠ ಕಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಪ್ರತಿಕ್ರಿಯಿಸಿ, ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯ ಹಣಕಾಸಿನ ಮುಗ್ಗಟ್ಟಿಗೆ ತಲುಪಿರುವುದು ನಾಚಿಕೆಗೇಡಿನ ವಿಚಾರ. ಸರಕಾರ ಬೇರೆ ವಿಶ್ವವಿದ್ಯಾಲಯಗಳಿಗಿಂತ ವಿಶೇಷವಾಗಿ ಕನ್ನಡ ವಿಶ್ವವಿದ್ಯಾಲಯವನ್ನು ಬೆಳೆಸುವುದಕ್ಕೆ ಆದ್ಯತೆ ನೀಡಬೇಕೆಂದು ಎಲ್ಲಾ ಕನ್ನಡಿಗರ ಪರವಾಗಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.
ಕನ್ನಡ ಸಂಸ್ಕೃತಿ, ಭಾಷೆ ಅಭಿವೃದ್ಧಿ, ಸಾಹಿತ್ಯ, ಜನಪದ, ವಿಮರ್ಶೆ ಇತ್ಯಾದಿ ಪ್ರಕಾರಗಳಿಗೆ ಕನ್ನಡ ವಿಶ್ವವಿದ್ಯಾನಿಲಯ ನೀಡಿರುವ ಕೊಡುಗೆ ಅನನ್ಯ. ಕನ್ನಡ ವಿಶ್ವವಿದ್ಯಾನಿಲಯ ಕನ್ನಡದ ಅಸ್ಮಿತೆ ಮತ್ತು ಕರ್ನಾಟಕವೆಂಬ ಪರಿಕಲ್ಪನೆಯ ರೂಪಕ. ಭಾಷೆ ಮತ್ತು ಸಂಸ್ಕೃತಿ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾನಿಲಯವನ್ನು ಉಳಿಸುವ ಅಗತ್ಯತೆ ಹೆಚ್ಚಾಗಿದೆ ಎಂದು ಚಿಂತಕ ಪ್ರೊ.ಮುಜಾಫರ್ ಅಸಾದಿ ತಿಳಿಸಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಮುಗ್ಗಟ್ಟಿನ ಕರುಣಾಜನಕ ಪರಿಸ್ಥಿತಿ ಕುರಿತ ವರದಿ ಆತಂಕ ಮೂಡಿಸಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಶೈಕ್ಷಣಿಕ ದುರಂತವೆಂದರೆ ಸರಕಾರ ಇದನ್ನು ಇಷ್ಟು ಬೆಳೆಯಲು ಬಿಟ್ಟಿರುವುದಾಗಿದೆ. ಕೂಡಲೇ ಕನ್ನಡ ವಿವಿಗೆ ಅಗತ್ಯವಿರುವ ಅನುದಾನವನ್ನು ಬಿಡಬೇಕೆಂದು ಪ್ರೊ.ಹಂ.ಪ.ನಾಗರಾಜಯ್ಯ ಒತ್ತಾಯಿಸಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಕಡಿಮೆಯಾಗಿ ಗುಣಮಟ್ಟ ಇಳಿಯುತ್ತಿದ್ದ ಹೊತ್ತಿನಲ್ಲಿ, ಅದನ್ನೇ ಪ್ರಧಾನವಾಗಿಸಿಕೊಂಡು ಆರಂಭವಾದ ಸಂಸ್ಥೆಯೇ ಹಂಪಿ ವಿಶ್ವವಿದ್ಯಾಲಯ. ಕನ್ನಡ ವಿವಿಯಲ್ಲಿ ಅಂತರ್ ಶಿಸ್ತೀಯ ಒಡನಾಟದ ಮಾದರಿಯೊಂದನ್ನು ರೂಪಿಸಿ, ವಿಶಿಷ್ಟ ಬಗೆಯ ಅಧ್ಯಯನ-ಸಂಶೋಧನೆ-ಶಿಕ್ಷಣದ ಸಂಯೋಜನೆಯನ್ನು ಕಟ್ಟಿದರು. ಇಂತಹ ಸಂಸ್ಥೆಯು ಕನ್ನಡದ ಕರ್ನಾಟಕದ ಹೆಮ್ಮೆ. ಇದನ್ನು ವಿಸ್ತರಿಸುವ ಬದಲಿಗೆ ಅನುದಾನದ ಕಡಿತದ ಮೂಲಕ ನಾಶ ಮಾಡುವ ಪ್ರಯತ್ನ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಡಾ.ಎಚ್.ವಿ.ವಾಸು ಆರೋಪಿಸಿದ್ದಾರೆ.
ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಚಿಂತಕ ಜೆ.ಎಸ್. ಪಾಟೀಲ್, ಲೇಖಕ ಕೆ.ಎಸ್.ರವಿಕುಮಾರ್ ಸೇರಿದಂತೆ ಇನ್ನಿತರೆ ಸಾಮಾಜಿಕ ಹೋರಾಟಗಾರರು ಕನ್ನಡ ವಿಶ್ವವಿದ್ಯಾಲಯಕ್ಕೆ ಕೂಡಲೇ ಅನುದಾನ ಬಿಡಬೇಕೆಂದು ಕನ್ನಡ ವಿಶ್ವವಿದ್ಯಾಲವನ್ನು ಆಗ್ರಹಿಸಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಸಾಂಸ್ಕೃತಿಕ ಹೆಮ್ಮೆ, ಇದರ ಸಂಪೂರ್ಣ ಉನ್ನತಿಗೆ ಕರ್ನಾಟಕ ಸರಕಾರ ನೆರವಾಗಬೇಕು. ಹೊಣೆಗೇಡಿತನವನ್ನು ಇತಿಹಾಸ ಕ್ಷಮಿಸುವುದಿಲ್ಲ.
ಪ್ರೊ.ಕಾಳೇಗೌಡ ನಾಗವಾರ, ಸಂಸ್ಕೃತಿ ಚಿಂತಕ
ಕನ್ನಡದಲ್ಲಿ ಏನಾದರೂ ಕೆಲಸ ಮಾಡಬೇಕೆಂದು ಆಸೆಯಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಕೊಡುತ್ತಿಲ್ಲವಂತೆ, ಗುತ್ತಿಗೆ ನೌಕರರಿಗೆ ಅಲ್ಲಿ ಸಂಬಳ ಕೊಡುತ್ತಿಲ್ಲವಂತೆ, ವಿಶ್ವವಿದ್ಯಾಲಯದ ವಾರ್ಷಿಕ ಖರ್ಚು ವೆಚ್ಚಗಳಿಗೆ ನೀಡುತ್ತಿದ್ದ ಅನುದಾನವನ್ನೂ ನಿಲ್ಲಿಸಲಾಗಿದೆಯಂತೆ. ಇದಕ್ಕೆಲ್ಲ ಕಾರಣವಾಗಿರುವ ಸರಕಾರ, ತನ್ನ ಉದ್ದೇಶವಾದರೂ ಏನೆಂದು ಸ್ಪಷ್ಟ ಪಡಿಸಬೇಕು.
-ಬೊಳುವಾರು ಮುಹಮ್ಮದ್ ಕುಂಞ, ಕಾದಂಬರಿಕಾರ







