ವಿಮಾನ ಸೇವೆಗಳ ನಿರ್ಬಂಧ ಇನ್ನೂ ಒಂದು ವಾರ ವಿಸ್ತರಿಸಿದ ಸೌದಿ ಅರೇಬಿಯಾ

ರಿಯಾದ್ : ಇಂಗ್ಲೆಂಡ್ನಲ್ಲಿ ಮೊದಲು ಕಾಣಿಸಿಕೊಂಡ ಕೊರೋನವೈರಸ್ನ ಹೊಸ ಪ್ರಬೇಧದ ಕುರಿತು ಇರುವ ವ್ಯಾಪಕ ಆತಂಕದ ಹಿನ್ನೆಲೆಯಲ್ಲಿ ಪ್ಯಾಸೆಂಜರ್ ವಿಮಾನ ಸೇವೆಗಳ ಸ್ಥಗಿತವನ್ನು ಇನ್ನೂ ಒಂದು ವಾರ ಕಾಲ ಸೌದಿ ಅರೇಬಿಯಾ ವಿಸ್ತರಿಸಿದೆ. ಆದರೆ ಕೆಲವೊಂದು ತುರ್ತು ಪ್ರಕರಣಗಳಿಗೆ ಮಾತ್ರ ಈ ಆದೇಶದಿಂದ ವಿನಾಯಿತಿ ದೊರೆಯಬಹುದು ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೌದಿಯಲ್ಲಿರುವ ವಿದೇಶೀಯರಿಗೆ ದೇಶ ಬಿಟ್ಟು ತೆರಳಲು ಹಾಗೂ ಸರಕು ಸಾಗಾಟಕ್ಕೆ ಅನುಮತಿ ಇರಲಿದೆ ಎಂದು ಸಚಿವಾಲಯ ತಿಳಿಸಿದೆ. ಸೌದಿ ನಾಗರಿಕರ ಹಾಗೂ ದೇಶದಲ್ಲಿರುವ ವಲಸಿಗ ಜನಸಂಖ್ಯೆಯ ಸುರಕ್ಷತೆಯನ್ನು ಗಮನದಲ್ಲಿರಿಸಿ ವಿಮಾನ ಸೇವೆಗಳ ಮೇಲಿನ ನಿರ್ಬಂಧವನ್ನು ಇನ್ನೊಂದು ವಾರ ಮುಂದುವರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕುವೈತ್ ಹಾಗೂ ಓಮಾನ್ ಕೂಡ ಪ್ರಯಾಣಿಕ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿ ಸಮುದ್ರದ ಮೂಲಕವೂ ಆಗಮನ ನಿರ್ಗಮನಕ್ಕೆ ನಿಷೇಧ ಹೇರಿದ್ದವು. ವಿಮಾನ ಸೇವೆಗಳ ಸ್ಥಗಿತವನ್ನು ಓಮಾನ್ ಡಿಸೆಂಬರ್ 29ರಂದು ಹಾಗೂ ಕುವೈತ್ ಜನವರಿ 1ರಂದು ಅಂತ್ಯಗೊಳಿಸುವುದಾಗಿ ಈಗಾಗಲೇ ಹೇಳಿವೆ.