ಹಂಪಿ ವಿವಿಗೆ ಶೀಘ್ರ ಅನುದಾನ ಬಿಡುಗಡೆಯಾಗದಿದ್ದರೆ ರಾಜ್ಯಾದ್ಯಂತ ಹೋರಾಟ: ನಾರಾಯಣಗೌಡ
ಬೆಂಗಳೂರು, ಡಿ.28: ರಾಜ್ಯ ಸರಕಾರವು ಮುಂದಿನ ಐದು ದಿನಗಳೊಳಗೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡುವುದರ ಜತೆಗೆ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳುವ ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ಚಳವಳಿಯನ್ನು ತೀವ್ರಗೊಳಿಸಲಾಗುವುದು. ಸರಕಾರ ಕನ್ನಡಿಗರ ಒಕ್ಕೊರಲ ಆಗ್ರಹಕ್ಕೆ ಕಿವುಡಾಗಿ ಕುಳಿತಿದೆ. ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಇನ್ನು ಐದು ದಿನಗಳೊಳಗೆ ತೀರ್ಮಾನವಾಗದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಪದೇ ಪದೇ ಚಳವಳಿ ಮಾಡಬೇಡಿ, ಮಾತುಕತೆಗೆ ಬನ್ನಿ, ಚಳವಳಿಗಳಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ. ಆದರೆ, ಸರಕಾರಕ್ಕೆ ಮನವಿ ಸಲ್ಲಿಸಿದ ಮೇಲೂ ಮೌನವಾಗಿದ್ದಾರೆ. ಉನ್ನತ ಶಿಕ್ಷಣ ಸಚಿವರು ನೀಡಿದ ಭರವಸೆ ಹುಸಿಯಾಗಿದೆ. ಸರಕಾರ ಸಂವೇದನಾಶೀಲತೆಯನ್ನು ಕಳೆದುಕೊಂಡಿದೆ. ದಪ್ಪ ಚರ್ಮದ ರಾಜಕಾರಣಿಗಳು, ಅಧಿಕಾರಿಗಳು ರಾಜ್ಯದ ಜನರ ಕೂಗಿಗೆ ಬೆಲೆಕೊಡುತ್ತಿಲ್ಲ. ಹೀಗಾದಲ್ಲಿ ಸಾಮಾನ್ಯ ಜನರ ಸಿಟ್ಟು ಕಟ್ಟೆಯೊಡೆದು, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್‍ರನ್ನು ಕರವೇ ಮುಖಂಡರ ನಿಯೋಗದೊಂದಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿದೆ. ಆಗ ಅವರು, ಸಕಾರಾತ್ಮಕವಾಗಿ ಸ್ಪಂದಿಸಿ, ಕೂಡಲೇ ಹಂಪಿ ಕನ್ನಡ ವಿವಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಅವರು ಕೊಟ್ಟ ಮಾತಿನಂತೆ ಉಳಿದುಕೊಂಡಿಲ್ಲ. ಸರಕಾರದ ಧೋರಣೆಯನ್ನು ಖಂಡಿಸಿ ನಡೆಯುತ್ತಿರುವ ಚಳವಳಿಯಲ್ಲಿ ಸಾಹಿತಿಗಳು, ಸಂಶೋಧಕರು, ಸಮಾಜ ವಿಜ್ಞಾನಿಗಳು, ಮಠಾಧೀಶರು, ಚಿಂತಕರು, ಧರ್ಮಗುರುಗಳು ಈ ಚಳವಳಿಯಲ್ಲಿ ಪಾಲ್ಗೊಂಡು ಆಗ್ರಹಿಸಿದ್ದಾರೆ. ಇಷ್ಟಾದರೂ ಸರಕಾರ ಬೇಜವಾಬ್ದಾರಿ ಮತ್ತು ಉದಾಸೀನ ಪ್ರವೃತ್ತಿಯನ್ನು ಮುಂದುವರಿಸಿದೆ ಎಂದು ಅವರು ಆಕ್ಷೇಪಿಸಿದ್ದಾರೆ.







