ಕೊರೋನಕ್ಕೆ ಹೊಸ ಮಾರ್ಗಸೂಚಿ ಜಾರಿಗೊಳಿಸಿದ ಗೃಹ ಸಚಿವಾಲಯ

ಹೊಸದಿಲ್ಲಿ, ಡಿ. 28: ಕೋವಿಡ್-19ರ ಕಣ್ಗಾವಲಿಗೆ ಈ ಹಿಂದಿನ ಮಾರ್ಗಸೂಚಿಗಳನ್ನು ಗೃಹ ಸಚಿವಾಲಯ ಜನವರಿ 31ರ ವರೆಗೆ ಅನ್ವಯವಾಗುವಂತೆ ಸೋಮವಾರ ವಿಸ್ತರಿಸಿದೆ.
ದೇಶದಲ್ಲಿ ಸಕ್ರಿಯ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ನಿರಂತರ ಇಳಿಕೆಯಾಗುತ್ತಿದೆ. ಆದರೆ, ಜಾಗತಿಕವಾಗಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಹಾಗೂ ಬ್ರಿಟನ್‌ನಲ್ಲಿ ಹೊಸ ರೂಪಾಂತರಿತ ಕೊರೋನ ವೈರಸ್ ಕಂಡು ಬಂದಿರುವುದನ್ನು ಗಮನದಲ್ಲಿರಿಸಿ ಕಣ್ಗಾವಲು, ಕಂಟೈನ್ಮೆಂಟ್ ಹಾಗೂ ಎಚ್ಚರಿಕೆಯನ್ನು ನಿರ್ವಹಿಸುವ ಅಗತ್ಯ ಇದೆ ಎಂದು ಸಚಿವಾಲಯ ಹೇಳಿದೆ.
ಈ ಮಾರ್ಗಸೂಚಿಯಂತೆ ಕಂಟೈನ್ಮೆಂಟ್ ವಲಯಗಳನ್ನು ಎಚ್ಚರದಿಂದ ಗುರುತಿಸುವುದು ಮುಂದುವರಿಯುತ್ತದೆ; ಈ ವಲಯಗಳಲ್ಲಿ ನಿಗದಿತ ಕಂಟೈನ್ಮೆಂಟ್ ಕ್ರಮಗಳನ್ನು ಕಟ್ಟುನಿಟ್ಟಿನಿಂದ ಅನುಸರಿಸಲಾಗುತ್ತದೆ; ಕೋವಿಡ್‌ಗೆ ಸೂಕ್ತವಾದ ನಡವಳಿಕೆಯನ್ನು ಉತ್ತೇಜಿಸಲಾಗುತ್ತದೆ ಮತ್ತು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುತ್ತದೆ; ವಿವಿಧ ಅನುಮತಿ ಪಡೆದ ಚಟುವಟಿಕೆಗಳಿಗೆ ಸಂಬಂಧಿಸಿ ಸೂಚಿಸಲಾದ ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನ (ಎಸ್‌ಒಪಿ)ವನ್ನು ಸೂಕ್ಷ್ಮವಾಗಿ ಅನುಸರಿಸಲಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.







