ಇದೇ ಪ್ರಥಮ... ಎಲ್ಲ ರಾಜ್ಯಗಳಲ್ಲಿ ಕೋವಿಡ್ ಸೋಂಕು ಇಳಿಕೆ

ಹೊಸದಿಲ್ಲಿ, ಡಿ.29: ಕಳೆದ ಮಾರ್ಚ್‌ನಲ್ಲಿ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಾಪ್ತಾಹಿಕ ಸರಾಸರಿ ಇಳಿಮುಖವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಒಟ್ಟು ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದು ದೇಶದಲ್ಲಿ ಸೋಂಕು ಇಳಿಮುಖವಾಗುತ್ತಿರುವ ಸ್ಪಷ್ಟ ಸೂಚನೆಯಾಗಿದೆ ಎಂದು ವರದಿಗಳು ತಿಳಿಸಿವೆ.
ದಾದ್ರಾ ಮತ್ತು ನಗರ ಹವೇರಿ ಹಾಗೂ ಡಿಯು ಮತ್ತು ಡಮನ್‌ನಲ್ಲಿ ಮಾತ್ರ ಡಿಸೆಂಬರ್ 21-27ರ ಅವಧಿಯಲ್ಲಿ ಹಿಂದಿನ ವಾರಕ್ಕೆ ಹೋಲಿಸಿದರೆ ಎರಡು ಹೆಚ್ಚುವರಿ ಪ್ರಕರಣಗಳು ವರದಿಯಾಗಿವೆ.
ಈ ನಡುವೆ ದೇಶಾದ್ಯಂತ ಸೋಮವಾರ 15,143 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಜೂನ್ 23ರ ಬಳಿಕ ದಾಖಲಾದ ಕನಿಷ್ಠ ಸಂಖ್ಯೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ಕೂಡಾ 251ಕ್ಕೆ ಇಳಿದಿದ್ದು, ಇದು ಜೂನ್ 2ರ ಬಳಿಕ ಕನಿಷ್ಠ. ಸತತ ಏಳನೇ ವಾರ ಸರಾಸರಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಕಳೆದ 15 ವಾರಗಳ ಪೈಕಿ 14 ವಾರಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಡಿಸೆಂಬರ್ 14-20ರ ಅವಧಿಯಲ್ಲಿ ಕೇರಳದಲ್ಲಿ ಮಾತ್ರ ಅದಕ್ಕಿಂತ ಹಿಂದಿನ ವಾರಕ್ಕೆ ಹೋಲಿಸಿದರೆ 3,300 ಹೆಚ್ಚುವರಿ ಪ್ರಕರಣಗಳು ಕಾಣಿಸಿಕೊಂಡಿದ್ದವು. ಒಟ್ಟಾರೆಯಾಗಿ ಆರು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆ ವಾರ ಅಲ್ಪ ಪ್ರಮಾಣದ ಏರಿಕೆ ದಾಖಲಾಗಿತ್ತು.
ಕಳೆದ ವಾರ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ 1,900ರಷ್ಟು ಇಳಿದಿದೆ. ಆದಾಗ್ಯೂ ದೇಶದಲ್ಲಿ ಗರಿಷ್ಠ ಹೊಸ ಪ್ರಕರಣಗಳು (34,647) ದಾಖಲಾಗಿರುವುದು ಈ ರಾಜ್ಯದಲ್ಲಿ. ಮಹಾರಾಷ್ಟ್ರ (23,032), ಪಶ್ಚಿಮ ಬಂಗಾಳ (10,615) ಮತ್ತು ಛತ್ತೀಸ್‌ಗಢ (7,930) ನಂತರದ ಸ್ಥಾನಗಳಲ್ಲಿವೆ.







