ಟಿಆರ್‌ಪಿ ತಿದ್ದಲು ಅರ್ನಬ್ ನನಗೆ ಲಂಚ ನೀಡಿದ್ದಾರೆ: ಬಾರ್ಕ್ ಮಾಜಿ ಸಿಇಓ

ಮುಂಬೈ, ಡಿ.29: "ರಿಪಬ್ಲಿಕ್ ಟಿವಿ ಮಾಲಕ ಹಾಗೂ ಸಂಪಾದಕ ಅರ್ನಬ್ ಗೋಸ್ವಾಮಿ ಟಿಆರ್‌ಪಿ ತಿದ್ದಲು ನನಗೆ ಲಂಚ ನೀಡಿದ್ದು ನಿಜ" ಎಂದು ಟಿಆರ್‌ಪಿ ಹಗರಣದಲ್ಲಿ ಬಂಧಿತನಾಗಿರುವ ಬ್ರಾಡ್‌ಕಾಸ್ಟ್ ರೀಸರ್ಚ್ ಆಡಿಯನ್ಸ್ ಕೌನ್ಸಿಲ್ (ಬಾರ್ಕ್) ಮಾಜಿ ಸಿಇಓ ಪಾರ್ಥ ದಾಸ್‌ಗುಪ್ತಾ ಪೊಲೀಸ್ ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
"ತಮ್ಮ ಚಾನೆಲ್‌ಗೆ ಅಧಿಕ ಟಿಆರ್‌ಪಿ ನೀಡುವ ಸಲುವಾಗಿ ಲಕ್ಷಾಂತರ ರೂಪಾಯಿ ನಗದು ಹಾಗೂ ದುಬಾರಿ ವಾಚು ನೀಡಿದ್ದರು" ಎಂದು ವಿಚಾರಣೆ ವೇಳೆ ಪಾರ್ಥ ದಾಸ್‌ಗುಪ್ತಾ ಅವರು ಮುಂಬೈ ಪೊಲೀಸ್ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪಾರ್ಥ ದಾಸ್‌ಗುಪ್ತಾ ಮನೆಯಿಂದ ಮೂರು ಕೆಜಿ ಬೆಳ್ಳಿಯನ್ನು ಕೂಡಾ ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದಾರೆ. 2013ರಿಂದ 2019ರವರೆಗೆ ದಾಸ್‌ಗುಪ್ತಾ ಬಿಎಆರ್‌ಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಅರ್ನಬ್ ಗೋಸ್ವಾಮಿ ತಮ್ಮ ಇಂಗ್ಲಿಷ್ ಚಾನೆಲ್ ರಿಪಬ್ಲಿಕ್ ಟಿವಿ ಮತ್ತು ಹಿಂದಿ ಚಾನಲ್ ರಿಪಬ್ಲಿಕ್ ಭಾರತ್‌ಗೆ ಟಿಆರ್‌ಪಿ ನೆರವು ನೀಡಲು ನೀಡಿದ ಲಂಚದ ಹಣದಲ್ಲಿ ಈ ಬೆಳ್ಳಿ ಖರೀದಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಈ ತಿಂಗಳ 24ರಂದು ಗೋವಾದಿಂದ ಪುಣೆಗೆ ಹೋಗುತ್ತಿದ್ದ ದಾಸ್‌ಗುಪ್ತಾ (55) ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಟಿಆರ್‌ಪಿ ರೇಟಿಂಗ್ ಅಕ್ರಮದಲ್ಲಿ ಅರ್ನಬ್ ಗೋಸ್ವಾಮಿ ಜತೆ ದಾಸ್‌ಗುಪ್ತ ಶಾಮೀಲಾಗಿರುವುದು ದೃಢಪಟ್ಟಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
"ಟಿಆರ್‌ಪಿ ಮಾಪನಕ್ಕೆ ಬಾರೋಮೀಟರ್ ಅಳವಡಿಸಿದ್ದ ಮನೆಗಳ ಬಗೆಗಿನ ರಹಸ್ಯ ಮಾಹಿತಿಯನ್ನು ದಾಸ್‌ಗುಪ್ತಾ, ಅರ್ನಬ್ ಜತೆ ಹಂಚಿಕೊಂಡಿದ್ದರು. ಈ ದತ್ತಾಂಶ ಬಳಸಿಕೊಂಡು ಮನೆಮಂದಿಗೆ ಲಂಚ ನೀಡಿ, ಮನೆಮಂದಿಗೆ ಇಂಗ್ಲಿಷ್ ಭಾಷೆಯ ಅರಿವು ಇಲ್ಲದಿದ್ದರೂ ಆ ಚಾನೆಲ್ ಆನ್ ಮಾಡಿ ಇಡುವಂತೆ ಅರ್ನಬ್ ಕೇಳಿಕೊಂಡಿದ್ದರು. ಕೆಲ ಮನೆಗಳು ಮುಚ್ಚಿದ್ದರೂ ಆ ಮನೆಯಲ್ಲಿ ಚಾನಲ್ ಮಾತ್ರ ಆನ್ ಇರುತ್ತಿತ್ತು. ಟಿಆರ್‌ಪಿ ಹಗರಣದಲ್ಲಿ ಶಾಮೀಲಾದವರ ಸೂಚನೆ ಮೇರೆಗೆ ಹೀಗೆ ಮಾಡಲಾಗುತ್ತಿತ್ತು" ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ.







