ಹೀಗೊಂದು ವಿಶಿಷ್ಟ ಪ್ರತಿಭಟನೆ... ಈ.ಡಿ. ಕಚೇರಿ ಎದುರು 'ಬಿಜೆಪಿ ಕಾರ್ಯಾಲಯ' ಫಲಕ!

ಮುಂಬೈ, ಡಿ.29: ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಶಿವಸೇನೆಯ ಹಿರಿಯ ಮುಖಂಡ ಸಂಜಯ್ ರಾವತ್ ಅವರ ಪತ್ನಿಗೆ ಕಾನೂನು ಜಾರಿ ನಿರ್ದೇಶನಾಲಯ(ಈ.ಡಿ.) ಸಮನ್ಸ್ ಕಳುಹಿಸಿದ್ದನ್ನು ಪ್ರತಿಭಟಿಸಿ ಶಿವಸೇನೆ ಕಾರ್ಯಕರ್ತರು ಈ.ಡಿ. ಕಚೇರಿಯ ಮುಂದೆ 'ಬಿಜೆಪಿ ಕಾರ್ಯಾಲಯ' ಎಂಬ ಫಲಕ ತೂಗುಹಾಕಿದ್ದಾರೆ.
ಸಂಜಯ್ ರಾವತ್ ಅವರು ದಿಢೀರ್ ಸುದ್ದಿಗೋಷ್ಠಿ ನಡೆಸಿ, ಬಿಜೆಪಿಯ 121 ಮಂದಿಯ ಹೆಸರು ಇರುವ ಕಡತ ತಮ್ಮ ಬಳಿ ಇದ್ದು, ಇದನ್ನು ಶೀಘ್ರವೇ ನಿರ್ದೇಶನಾಲಯಕ್ಕೆ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ, ಪಕ್ಷದ ಕಾರ್ಯಕರ್ತರು ಹಿಂದಿಯಲ್ಲಿ "ಭಾಜಪಾ (ಬಿಜೆಪಿ) ಪ್ರದೇಶ ಕಾರ್ಯಾಲಯ" ಎಂದು ಬರೆದ ಫಲಕವನ್ನು ಇಡಿ ಕಚೇರಿಯ ಮುಂದೆ ನೇತು ಹಾಕಿದ್ದಾರೆ.
ಇನ್ನೊಂದು ವಿಡಿಯೊದಲ್ಲಿ ಬ್ಯಾನರ್ ಹಾಕುತ್ತಿರುವ ವ್ಯಕ್ತಿಯ ಜತೆ ಪೊಲೀಸ್ ಅಧಿಕಾರಿ ಮಾತನಾಡುತ್ತಿರುವುದು ಕಾಣಿಸುತ್ತಿದೆ. ಬಹುಶಃ ಬ್ಯಾನರ್ ಹಾಕದಂತೆ ತಡೆಯುತ್ತಿದ್ದಾರೆ. ಆ ವ್ಯಕ್ತಿ ಆ ಅಧಿಕಾರಿಗೆ "ನೀವು ಬಿಎಂಸಿಗೆ ದೂರು ನೀಡಿ" ಎಂದು ಮರಾಠಿಯಲ್ಲಿ ಹೇಳುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾವುತ್, "ಬಿಜೆಪಿ ಕಾರ್ಯಾಲಯ ಕಾನೂನು ಜಾರಿ ನಿರ್ದೇಶನಾಲಯದ ಕಚೇರಿಯಾಗಿದೆ; ಅಥವಾ ಕಾನೂನು ಜಾರಿ ನಿರ್ದೇಶನಾಲಯದ ಕಚೇರಿ ಬಿಜೆಪಿ ಕಾರ್ಯಾಲಯವಾಗಿದೆ" ಎಂದು ವ್ಯಂಗ್ಯವಾಡಿದ್ದರು. ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ ವಿರುದ್ಧ ಮಾತನಾಡುವವರು ಹಾಗೂ ತಮ್ಮ ಮೈತ್ರಿಕೂಟದಲ್ಲಿ ಇಲ್ಲದವರ ಸದ್ದಡಗಿಸಲು ಬಿಜೆಪಿ ಕೇಂದ್ರೀಯ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.







