ರಾಜಕೀಯವಾಗಿ ಎಲ್ಲ ಪಕ್ಷಗಳ ಮುಖಂಡರ ಒಡನಾಡಿಯಾಗಿದ್ದ ಎಸ್.ಎಲ್.ಧರ್ಮೇಗೌಡ

ಚಿಕ್ಕಮಗಳೂರು, ಡಿ.29: ವಿಧಾನ ಪರಿಷತ್ ಉಪಸಭಾಪತಿ, ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಎಸ್.ಎಲ್.ಧರ್ಮೇಗೌಡ ಅವರ ಹಠಾತ್ ನಿಧನದ ಸುದ್ದಿ ಜಿಲ್ಲೆ ಹಾಗೂ ರಾಜ್ಯ ರಾಜಕೀಯ ವಲಯವನ್ನು ಕಂಗೆಡಿಸಿದೆ.
ಎಸ್.ಎಲ್.ಧರ್ಮೇಗೌಡ ಅವರು ಜೆಡಿಎಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿದ್ದರೂ, ರಾಜಕೀಯವಾಗಿ ಎಲ್ಲ ಪಕ್ಷಗಳ ಮುಖಂಡರ ಒಡನಾಡಿಯಾಗಿದ್ದರು.
ದಿ.ಲಕ್ಷ್ಮಯ್ಯ, ಕೃಷ್ಣಮ್ಮ ದಂಪತಿ ಹಿರಿಯ ಮಗನಾಗಿ ಕಡೂರು ತಾಲ್ಲೂಕು ಸಖರಾಯಪಟ್ಟಣ ಹೋಬಳಿ ಸರಪನಹಳ್ಳಿ ಗ್ರಾಮದಲ್ಲಿ 1956ರಲ್ಲಿ ಜನಿಸಿದ ಧರ್ಮೇಗೌಡ, ತಂದೆ ಲಕ್ಷ್ಮಯ್ಯ ಶಾಸಕರಾಗಿ ಆಗಿದ್ದ ಜನತಾ ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ರಂಗವನ್ನು ಪ್ರವೇಶಿಸಿದರು. 1985ರಲ್ಲಿ ಸರಪನಹಳ್ಳಿ ಗ್ರಾಪಂ ಚುನಾವಣೆ ಎದುರಿಸಿದ ಅವರು, ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. ಪಂಚಾಯತ್ ಸದಸ್ಯರಾಗಿ ಜನರ ಪ್ರೀತಿಗಳಿಸಿದ ಅವರನ್ನು ಕ್ಷೇತ್ರದ ಜನರು ಜಿಲ್ಲಾ ಪಂಚಾಯತ್ ಎರಡು ಬಾರಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರು. ಇದೇ ವೇಳೆ ಸಹಕಾರಿ ಕ್ಷೇತ್ರದಲ್ಲೂ ಛಾಪು ಮಾಡಿಸಲು ಆರಂಭಿಸಿದ ಧರ್ಮೇಗೌಡ ಅವರು, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಬಳಿಕ ಜಿಲ್ಲಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿಯೂ ಅವರು ಜಿಲ್ಲೆಯ ರೈತರ ಪರ ಕಾರ್ಯನಿರ್ವಹಿಸಿದ್ದರು. ಇವರ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ಉನ್ನತ ಶ್ರೇಣಿ ಸ್ಥಾನ ಪಡೆದುಕೊಂಡಿತು. ಇವರ ಸೇವಾ ಕಾರ್ಯಕ್ಕೆ ಸಹಕಾರಿ ಕ್ಷೇತ್ರದಿಂದ ಸಹಕಾರಿ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು.
ತಮ್ಮ ತಂದೆ ಸ್ಪರ್ಧಿಸಿ ಎರಡು ಬಾರಿ ಜನತಾ ಪಕ್ಷದಿಂದ ಶಾಸಕರಾಗಿ ಬೀರೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವಧಿಯಲ್ಲಿ ಧರ್ಮೆಗೌಡ ಅವರು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ಹತ್ತಿರವಾಗಿದ್ದರು. ಇದು ಧರ್ಮೇಗೌಡ ಬೀರೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಲು ನೆರವಾಯಿತು.
2004ರಲ್ಲಿ ಜೆಡಿಎಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಅವರು, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಅದೇ ಕ್ಷೇತ್ರದಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು.
ನಂತರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೇ ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರಿಗೆ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಿಎಂ ಕುಮಾರಸ್ವಾಮಿ ಧರ್ಮೇಗೌಡ ಅವರ ಕುಟುಂಬದವರ ಮೇಲಿದ್ದ ಪ್ರೀತಿ, ಅಭಿಮಾನದಿಂದಾಗಿ ಧರ್ಮೇಗೌಡ ಹಾಗೂ ಅವರ ಸಹೋದರ ಎಸ್.ಎಲ್.ಬೋಜೆಗೌಡರನ್ನು ರಾಜ್ಯ ರಾಜಕಾರಣಕ್ಕೆ ಕರೆ ತರಲು ನಿರ್ಧರಿಸಿದರು. ಅದರಂತೆ ಧರ್ಮೇಗೌಡರನ್ನು ವಿಧಾನ ಪರಿಷತ್ ಗೆ ಅವಿರೋಧವಾಗಿ ಅಯ್ಕೆ ಮಾಡಿ, ಬೋಜೆಗೌಡರನ್ನು ನೈರುತ್ಯ ಶಿಕ್ಷಕರ ಕ್ಷೆತ್ರದಿಂದ ಚುನಾವಣೆಗೆ ನಿಲ್ಲಿಸಿ ವಿಧಾನ ಪರಿಷತ್ ಗೆ ಆಯ್ಕೆಯಾಗುವಂತೆ ಮಾಡಿಸಿದ್ದರು.
ಸಮ್ಮಿಶ್ರ ಸರಕಾರದ ಅವಧಿಯಲ್ಲಿ ವಿಧಾನ ಪರಿಷತ್ ಉಪಸಭಾಪತಿಯಾಗಿಯೇ ಕಾರ್ಯನಿರ್ವಹಿಸಿದ್ದ ಅವರು ಕುಮಾರಸ್ವಾಮಿ ಸರಕಾರದ ನಂತರ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರದ ಅವಧಿಯಲ್ಲೂ ಉಪಸಭಾಪತಿಯಾಗಿ ಮುಂದುವರಿದಿದ್ದ ಅವರು ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲ ಸಚಿವರೊಂದಿಗೂ ಆಪ್ತರಾಗಿದ್ದರು.
ವಿಧಾನ ಪರಿಷತ್ ನಲ್ಲಿ ಇತ್ತೀಚಿಗೆ ನಡೆದ ಬಿಜೆಪಿ ಕಾಂಗ್ರೆಸ್ ಸದಸ್ಯರ ಗಲಾಟೆ ವಿಚಾರ ಸಂಬಂಧ ಆಘಾತಕ್ಕೊಳಗಾಗಿದ್ದ ಅವರು ಪರಿಷತ್ ಗಲಾಟೆ ಬಗ್ಗೆ ತೀವ್ರ ನೊಂದಿದ್ದರು.






.gif)
.gif)
.gif)

