ಬ್ರಿಟನ್‌ನಿಂದ ಬಂದಿರುವ ಆರು ಭಾರತೀಯರಲ್ಲಿ ರೂಪಾಂತರಿತ ಕೊರೋನ ವೈರಸ್ ಪತ್ತೆ
ಮೂವರು ಸೋಂಕಿತರು ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲು

ಹೊಸದಿಲ್ಲಿ: ಶೇಕಡಾ 70ಕ್ಕಿಂತ ಹೆಚ್ಚು ಸಾಂಕ್ರಾಮಿಕ ಎಂದು ನಂಬಲಾದ ಹಾಗೂ ಬ್ರಿಟನ್‌ನಲ್ಲಿ ಮೊದಲು ವರದಿಯಾದ ರೂಪಾಂತರಿತ ಕೊರೋನ ವೈರಸ್‌ನ ಆರು ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಸರಕಾರ ಇಂದು ತಿಳಿಸಿದೆ.
ಎಲ್ಲ ಆರು ರೋಗಿಗಳು ಇತ್ತೀಚೆಗೆ ಬ್ರಿಟನ್‌ನಿಂದ ಮರಳಿದ್ದರು.
ರೋಗಿಗಳಲ್ಲಿ ಮೂವರು ಬೆಂಗಳೂರಿನ ನಿಮ್ಹಾನ್ಸ್, ಇಬ್ಬರು ಹೈದರಾಬಾದ್‌ನ ಸಿಸಿಎಂಬಿ ಹಾಗೂ ಒಬ್ಬರು ಪುಣೆಯ ಎನ್‌ಐವಿಯಲ್ಲಿದ್ದಾರೆ.
ಎಲ್ಲ ರೋಗಿಗಳನ್ನು ರಾಜ್ಯ ಸರಕಾರಗಳು ಗೊತ್ತುಪಡಿಸಿದ ಆರೋಗ್ಯ ವ್ಯವಸ್ಥೆಗಳಲ್ಲಿ ಒಂದೇ ಕೋಣೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ನಿಕಟ ಸಂಪರ್ಕದಲ್ಲಿದ್ದವರನ್ನು ಸಹ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸಹ ಪ್ರಯಾಣಿಕರು, ಕುಟುಂಬದಲ್ಲಿ ಸಂಪರ್ಕಕ್ಕೆ ಬಂದವರು ಹಾಗೂ ಇತರರಿಗಾಗಿ ಸಮಗ್ರ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಆರಂಭಿಸಲಾಗಿದೆ ಎಂದು ಸರಕಾರ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ''ಕೊರೋನ ವೈರಾಣುವಿನ ರೂಪಾಂತರಗೊಂಡ ಪ್ರಬೇಧವನ್ನು ಪತ್ತೆ ಮಾಡಲು ಯು.ಕೆ.ನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದ್ದು. ಹೊಸ ಪ್ರಬೇಧದ ವೈರಸ್ ಹರಡದಂತೆ ತಡೆಯಲು ತಜ್ಞರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು'' ಎಂದು ತಿಳಿಸಿದ್ದಾರೆ.
ನವೆಂಬರ್ 25 ಹಾಗೂ ಡಿಸೆಂಬರ್ 23ರ ನಡುವೆ ಬ್ರಿಟನ್‌ನಿಂದ ಸುಮಾರು 33,000 ಪ್ರಯಾಣಿಕರು ಆಗಮಿಸಿದ್ದಾರೆ. ಈ ಪೈಕಿ 114 ಮಂದಿ ಕೋವಿಡ್ ಪಾಸಿಟಿವ್ ಆಗಿದ್ದರು.
ರೂಪಾಂತರಿತ ಕೊರೋನ ವೈರಸ್ ಪತ್ತೆಯಾದ ಕೆಲವು ದಿನಗಳ ಬಳಿಕ ಡಿಸೆಂಬರ್ 21ರಂದು ಭಾರತವು ಬ್ರಿಟನ್‌ನಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿದೆ. ಡಿಸೆಂಬರ್ 31ರ ತನಕ ಈ ನಿರ್ಬಂಧ ಇರುತ್ತದೆ.
ಕೊರೊನಾ ವೈರಾಣುವಿನ ರೂಪಾಂತರಗೊಂಡ ಪ್ರಬೇಧವನ್ನು ಪತ್ತೆ ಮಾಡಲು ಯು.ಕೆ.ನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದ್ದು. ಹೊಸ ಪ್ರಬೇಧದ ವೈರಸ್ ಹರಡದಂತೆ ತಡೆಯಲು ತಜ್ಞರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು.
— Dr Sudhakar K (@mla_sudhakar) December 29, 2020







