ಜ.1ರ ಬ್ಯಾರಿ ಭವನದ ಶಿಲಾನ್ಯಾಸ ಕಾರ್ಯಕ್ರಮ ಮುಂದೂಡಿಕೆ
ಶಾಸಕ ಯು.ಟಿ.ಖಾದರ್‌ರಿಂದ ಗೊಂದಲ ಸೃಷ್ಟಿ: ರಹೀಂ ಉಚ್ಚಿಲ್ ಆರೋಪ

ಮಂಗಳೂರು, ಡಿ.29: ಜನವರಿ 1ರಂದು ತೊಕ್ಕೊಟ್ಟು ಸಮೀಪದ ನಡೆಯಲಿರುವ ನೂತನ ಬ್ಯಾರಿ ಅಕಾಡಮಿಯ ಕಚೇರಿ ಹಾಗೂ ಸಾಂಸ್ಕೃತಿಕ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ಅಕಾಡಮಿಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬ್ಬಕ್ಕ ಭವನಕ್ಕೆ ಮೀಸಲಾದ ಜಾಗದಲ್ಲಿ ತನ್ನ ಒಪ್ಪಿಗೆಯ ಮೇರೆಗೆ ಬ್ಯಾರಿ ಅಕಾಡಮಿಯ ಸಾಂಸ್ಕೃತಿಕ ಭವನ ನಿರ್ಮಾಣವಾಗಲಿದೆ ಎಂದು ಸ್ಥಳೀಯ ಶಾಸಕ ಯು.ಟಿ.ಖಾದರ್ ಪತ್ರಿಕೆಯೊಂದಕ್ಕೆ ನೀಡಿದ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಅಬ್ಬಕ್ಕ ಅಭಿಮಾನಿಗಳು ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಶಾಸಕರ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿರುತ್ತದೆ ಎಂದು ಆಪಾದಿಸಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಪತ್ರಿಕೆಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಭವನ ನಿರ್ಮಾಣವಾಗಿರುವ ಬಗ್ಗೆಯೂ ತಿಳಿಸಿರುತ್ತಾರೆ. ಹೀಗಿರಬೇಕಾದರೆ ಇಲ್ಲಿ ಇನ್ನೊಂದು ಭವನವ ಔಚಿತ್ಯವೇನಿತ್ತು ಎಂಬ ಪ್ರಶ್ನೆಯನ್ನು ಹಲವಾರು ಎತ್ತಿದ್ದಾರೆ. ಬೆಂಗಳೂರಿನಲ್ಲಿರುವ ಭವನ 25 ವರ್ಷಗಳಿಂದ ನನೆಗುದ್ದಿಗೆ ಬಿದ್ದಿರುವಂತಹ ಯೋಜನೆಯಾಗಿದ್ದು, ಅದು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನವರ ಖಾಸಗಿ ಭವನವಾಗಿದೆ. ಖಾಸಗಿಯವರು ಮಾಡುವ ಭವನಕ್ಕೂ ಸರಕಾರದ ವತಿಯಿಂದ ಅಕಾಡಮಿಯು ನಿರ್ಮಿಸಲಿರುವ ಭವನಕ್ಕೂ ಯಾವುದೇ ಸಂಬಂಧವಿಲ್ಲ.
ಅಬ್ಬಕ್ಕ ಭವನಕ್ಕೆ ಮೀಸಲಾದ 42 ಸೆಂಟ್ಸ್ ಸ್ಥಳಕ್ಕೂ ಬ್ಯಾರಿ ಭವನಕ್ಕೆ ಮೀಸಲಾದ ಜಮೀನಿಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಪಕ್ಕದಲ್ಲೇ ಇರುವ ಗ್ರಾಮಕರಣಿಕರು ಮತ್ತು ಸರ್ವೇಯರ್ ಕಚೇರಿಗೆ ಮೀಸಲಿರಿಸಿದ್ದ 25 ಸೆಂಟ್ ಸ್ಥಳದಲ್ಲಿ ಅಕಾಡಮಿಯ ಕಚೇರಿ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣವಾಗಲಿದ್ದು, ಇದೇ ಕಟ್ಟಡದಲ್ಲಿ ಗ್ರಾಮಕರಣಿಕರ ಹಾಗೂ ಸರ್ವೇಯರ್ ಕಚೇರಿಯು ತಲೆ ಎತ್ತಲಿದೆ. ಇದನ್ನು ಅಬ್ಬಕ್ಕ ಉತ್ಸವ ಸಮಿತಿಗೆ ಈಗಾಗಲೇ ಮನವರಿಕೆ ಮಾಡಿದ್ದೇವೆ ಎಂದರು.
ಸುಮಾರು ಹತ್ತು ವರ್ಷಗಳಿಂದ ಅಬ್ಬಕ್ಕ ಭವನಕ್ಕೆ ಕಾದಿರಿಸಲಾದ ಜಾಗದಲ್ಲಿ ಈ ತನಕ ಅಬ್ಬಕ್ಕ ಭವನ ನಿರ್ಮಿಸದೆ ಪಕ್ಕದಲ್ಲಿ ಅಕಾಡಮಿಯ ಸಾಂಸ್ಕೃತಿಕ ಭವನ ತಲೆ ಎತ್ತುತ್ತಿರುವುದರಿಂದ ಕೆಲವರಿಗೆ ಅಸಮಾಧಾನವಾಗಿದ್ದು ಜನವರಿ 1ರಂದು ಮೌನ ಪ್ರತಿಭಟನೆಯನ್ನು ಅಬ್ಬಕ್ಕ ಸಮಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆ ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ಇದೆ .ಯಾವುದೇ ಸಮಾಜಕ್ಕೆ ನೋವನ್ನುಂಟು ಮಾಡಿ ಶಿಲಾನ್ಯಾಸ ಕಾರ್ಯಕ್ರಮ ನಡೆಸುವುದು ಸಮಂಜಸವಲ್ಲ ಎಂದು ಭಾವಿಸಿ ಎಲ್ಲರ ಮನ ಒಲಿಸಿ ಅಬ್ಬಕ್ಜ ಭವನಕ್ಕೂ ನ್ಯಾಯ ಒದಗಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿ ಅಕಾಡಮಿಯ ಶಿಲಾನ್ಯಾಸ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರಹೀಂ ಉಚ್ಚಿಲ್ ಸ್ಪಷ್ಟಪಡಿಸಿದರು.
ಕೆಲವರು ಇದು ಒಂದು ಧರ್ಮೀಯರಿಗೆ ಸೇರಿದ ಭವನವಾಗಲಿದ್ದು, ಇಲ್ಲಿ ಒಂದು ಧರ್ಮೀಯರಿಗೆ ಸೇರಿದ ಧಾರ್ಮಿಕ ಕೇಂದ್ರವಾಗಿ ಚಟುವಟಿಕೆ ನಡೆಸಲಿದೆ ಎಂಬ ಅಪಪ್ರಚಾರ ನಡೆಸುತ್ತಿದ್ದು, ಇದು ಸತ್ಯಕ್ಜೆ ದೂರವಾಗಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಸೇರಿದಂತೆ ಹಲವು ಅಕಾಡಮಿಗಳು ಕನ್ನಡ ಸಂಸ್ಕೃತಿ ಇಲಾಖೆಯ ಅಧೀನದಲ್ಲಿದ್ದು ಭಾಷೆ ಕಲೆ ಸಾಹಿತ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದು ಯಾವುದೇ ಧಾರ್ಮಿಕ ಕೆಲಸ ಕಾರ್ಯಗಳಿಗೆ ಉತ್ತೇಜನ ನೀಡುತ್ತಿಲ್ಲ .ಇಲ್ಲಿ ನಿರ್ಮಾಣವಾಗಲಿರುವ ಭವನದ ತಳ ಅಂತಸ್ತು ವಾಹನ ನಿಲುಗಡೆಗೆ ಪ್ರಥಮ ಅಂತಸ್ತು ಸಾರ್ವಜನಿಕ ಸಾಂಸ್ಕೃತಿಕ ಸಭಾ ಭವನವಾಗಿದ್ದು, ಎರಡನೇ ಅಂತಸ್ತಿನಲ್ಲಿ ಅಕಾಡಮಿಯ ಕಚೇರಿ ಕಾರ್ಯ ನಿರ್ವಹಿಸಲಿದೆ.
ಮೂರನೇ ಅಂತಸ್ತಿನಲ್ಲಿ ಗ್ರಾಮಕರಣಿಕರ ಹಾಗೂ ಸರ್ವೇಯರ್ ಕಚೇರಿ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ನೀಲ ನಕ್ಷೆಯನ್ನು ವೀಕ್ಷಿಸ ಬಹುದಾಗಿದೆ. ಹೀಗಿದ್ದರೂ ಅಕಾಡಮಿಯ ಭವನ ಜನರನ್ನು ಕಲೆ ಸಾಹಿತ್ಯದ ಹೆಸರಲ್ಲಿ ಒಗ್ಗೂಡಿಸುವ ಭವನವಾಗಬೇಕೇ ಹೊರತು ಬೇರ್ಪಡಿಸುವ ಭವನವಾಗಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿ ಎಲ್ಲರ ಸಹಕಾರದೊಂದಿಗೆ ಮುಂದಿನ ದಿನದಲ್ಲಿ ನಿರ್ಮಾಣವಾಗಲಿದ್ದು, ಎಲ್ಲ ಗೊಂದಲ ಹಾಗೂ ಸಂಶಯಗಳಿಗೆ ಶಾಶ್ವತ ತೆರೆ ಎಳೆಯಲಾಗುವುದು ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾದ ರೂಪಾಶ್ರೀ ವರ್ಕಾಡಿ, ರೂಪೇಶ್ ಉಪಸ್ಥಿತರಿದ್ದರು.








