ಬಿಜೆಪಿಗೆ ರಾಜೀನಾಮೆ ನೀಡಿದ ಸಂಸದ, ಆದಿವಾಸಿ ನಾಯಕ ಮನ್ಸುಖ್ ವಾಸವ

ವಡೋದರಾ : ಭರೂಚ್ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಆದಿವಾಸಿ ನಾಯಕ ಮನ್ಸುಖ್ ವಾಸವ ಇಂದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನರ್ಮದಾ ಜಿಲ್ಲೆಯ 121 ಗ್ರಾಮಗಳನ್ನು `ಪರಿಸರ ಸೂಕ್ಷ್ಮ ವಲಯ' ಎಂದು ಘೋಷಿಸಿ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿದ ಅಧಿಸೂಚನೆಯನ್ನು ವಾಪಸ್ ಪಡೆಯುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಆವರು ಪತ್ರ ಬರೆದ ಎರಡು ದಿನಗಳಲ್ಲಿಯೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು indianexpress.com ವರದಿ ಮಾಡಿದೆ.
ಮುಂಬರುವ ಬಜೆಟ್ ಅಧಿವೇಶನದ ವೇಳೆ ಸಂಸದ ಸ್ಥಾನಕ್ಕೆ ತಮ್ಮ ರಾಜೀನಾಮೆಯನ್ನು ಸ್ಪೀಕರ್ ಅವರಿಗೆ ಸಲ್ಲಿಸುವುದಾಗಿ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟೀಲ್ ಅವರಿಗೆ ಬರೆದ ಪತ್ರದಲ್ಲಿ ಮನ್ಸುಖ್ ವಾಸವ ಹೇಳಿದ್ದಾರೆ.
ಶೂಲ್ಪನೇಶ್ವರ್ ವನ್ಯಜೀವಿ ಧಾಮದ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವ ಅಂತಿಮ ಅಧಿಸೂಚನೆಯ ಕುರಿತಂತೆ ನರ್ಮದಾ ಜಿಲ್ಲೆಯ ಆದಿವಾಸಿಗಳಲ್ಲಿ ಭುಗಿಲೆದ್ದಿರುವ ಅಸಮಾಧಾನದ ನಡುವೆ ಮನ್ಸುಖ್ ಅವರ ರಾಜೀನಾಮೆ ಬಂದಿದೆ. ಸರ್ದಾರ್ ಪಟೇಲ್ ಅವರ ಏಕತೆಯ ಪ್ರತಿಮೆಯ ಸುತ್ತಲಿನ 121 ಗ್ರಾಮಗಳನ್ನೂ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ. ರೈತರ ಹಾಗೂ ಸ್ಥಳೀಯರ ಹಿತಾಸಕ್ತಿ ಗಮನದಲ್ಲಿರಿಸಿ ಅಧಿಸೂಚನೆ ವಾಪಸ್ ಪಡೆಯಬೇಕೆಂದು ಇತ್ತೀಚೆಗೆ ಮನ್ಸುಖ್ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅಧಿಸೂಚನೆಯ ನೆಪದಲ್ಲಿ ಅಧಿಕಾರಿಗಳು ಆದಿವಾಸಿಗಳ ಖಾಸಗಿ ಜಮೀನುಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಈ ಕ್ರಮದ ಕುರಿತಂತೆ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯಲಾಗಿಲ್ಲದೇ ಇರುವುದರಿಂದ ಜನರಲ್ಲಿ ಭಯ ಮೂಡಿದೆ ಎಂದು ಪತ್ರದಲ್ಲಿ ಮನ್ಸುಖ್ ವಿವರಿಸಿದ್ದಾರೆ.







