ಕುರುಬರ ಎಸ್ಟಿ ಮೀಸಲಾತಿ ಹೋರಾಟಕ್ಕೆ ಬನ್ನಿ ಸಿದ್ದರಾಮಯ್ಯರನ್ನು ಕರೆಯಲು ನನಗೇನು ತೆವಲು: ಈಶ್ವರಪ್ಪ

ಮೈಸೂರು, ಡಿ.29: ಕುರುಬರ ಎಸ್ಟಿ ಮೀಸಲಾತಿ ಹೋರಾಟಕ್ಕೆ ಬನ್ನಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನವೊಲಿಸಲು ನನಗೇನು ತೆವಲು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಕುರುಬರ ಎಸ್ಟಿ ಮೀಸಲಾತಿ ಸಂಬಂಧ ಮೈಸೂರಿನಲ್ಲಿ ಆಯೋಜಿಸಿರುವ ವಿಭಾಗ ಮಟ್ಟದ ಸಮಾವೇಶದಲ್ಲಿ ಭಾಗವಹಿಸಲು ಮಂಗಳವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಕುರುಬರ ಎಸ್ಟಿ ಮೀಸಲಾತಿ ಹೋರಾಟಕ್ಕೆ ಬನ್ನಿ ಎಂದು ಸಿದ್ದರಾಮಯ್ಯ ಅವರನ್ನು ಕರೆಯಲು ನನಗೇನು ತೆವಲು ಬಂದಿಲ್ಲ, ಅಪೇಕ್ಷೆ ಇದ್ದವರು ಬರುತ್ತಾರೆ, ರಾಜ್ಯದಲ್ಲಿ ಕೋಟ್ಯಂತರ ಜನ ಇದ್ದಾರೆ, ಅವರನ್ನೆಲ್ಲಾ ಮನವೊಲಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಮುದಾಯದ ಮೇಲೆ ಯಾರಿಗೆ ನಂಬಿಕೆ ಇರುತ್ತದೊ ಅವರು ಬರುತ್ತಾರೆ. ಯಾರು ಬಂದರೂ ಸರಿ ಬರದಿದ್ದರೂ ಸರಿ ನಮ್ಮ ಹೋರಾಟ ನಡೆಯತ್ತದೆ ಎಂದು ಹೇಳಿದರು.
ನಮ್ಮ ಹಿಂದೆ ನಮ್ಮ ಸಮುದಾಯದ ಸ್ವಾಮೀಜಿಗಳಿದ್ದಾರೆ. ನಮ್ಮ ಹೋರಾಟದಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ನಂಬಿಕೆ ಇದೆ. ಇದು ಹೋರಾಟ ಅಲ್ಲ, ಜನಜಾಗೃತಿ, ಸ್ವಾತಂತ್ರ್ಯ ಪೂರ್ವದಿಂದಲೂ ಕುರುಬರು ಒಂದುಗೂಡಿಲ್ಲ, ಈ ಹಿನ್ನೆಲೆಯಲ್ಲಿ ಒಂದುಗೂಡಿಸುವ ಸಲುವಾಗಿ ಸಭೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲೇ ಕುರುಬರು ಎಸ್ಟಿ ಗೆ ಸೇರಿದ್ದಾರೆ ಎಂಬ ದಾಖಲೆಗಳಿವೆ. ಎಸ್ಟಿ ಗೆ ಸೇರಿಸಲು ಡಿ.ದೇವರಾಜ ಅರಸು, ರಾಮಕೃಷ್ಣ ಹೆಗ್ಡೆ, ಅವರ ಸಹಕಾರ ಕೇಳಿದ್ದೆವು ಅದು ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಿ ಎಂದು ಕೇಳುತ್ತಿದ್ದೇವೆ ಎಂದರು.
ಕುರುಬರನ್ನು ಎಸ್ಟಿ ಸೇರಿಸಬೇಕು ಎಂಬ ಹೋರಾಟಕ್ಕೆ ಮಠಾಧೀಶರ ವಿರೋಧ ಇಲ್ಲ, ಮಠಾಧೀಶರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಕುರುಬ ಸಮುದಾಯ ಇಬ್ಭಾಗ ಆಗುತ್ತಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.







