‘ಫ್ರೀ ಕಾಶ್ಮೀರ’ ಪೋಸ್ಟರ್ ಪ್ರಕರಣ: ಪೊಲೀಸರಿಂದ ನ್ಯಾಯಾಲಯಕ್ಕೆ ‘ಸಿ ಸಮರಿ’ ರಿಪೋರ್ಟ್ ಸಲ್ಲಿಕೆ

ಸಾಂದರ್ಭಿಕ ಚಿತ್ರ
ಮುಂಬೈ,ಡಿ.29: ಈ ವರ್ಷದ ಜನವರಿಯಲ್ಲಿ ದಿಲ್ಲಿಯ ಜೆಎನ್ಯು ಹಿಂಸಾಚಾರವನ್ನು ವಿರೋಧಿಸಿ ಇಲ್ಲಿಯ ಗೇಟ್ವೇ ಆಫ್ ಇಂಡಿಯಾ ಬಳಿ ನಡೆದಿದ್ದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ (ಕಾಶ್ಮೀರವನ್ನು ಮುಕ್ತಗೊಳಿಸಿ)’ ಎಂಬ ಪೋಸ್ಟರ್ನ್ನು ಹಿಡಿದುಕೊಂಡಿದ್ದಕ್ಕಾಗಿ ಮಹಿಳೆಯೋರ್ವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ‘ಸಿ ಸಮರಿ’ ರಿಪೋರ್ಟ್ನ್ನು ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ತಪ್ಪುಗ್ರಹಿಕೆಯಿಂದ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೆ ಅಥವಾ ದೂರಿನಲ್ಲಿಯ ಆರೋಪವು ಸಿವಿಲ್ ಸ್ವರೂಪದ್ದಾಗಿದ್ದರೆ ಅಂತಹ ಸಂದರ್ಭಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ‘ಸಿ ಸಮರಿ ’ ರಿಪೋರ್ಟ್ ಸಲ್ಲಿಸಿ ಪ್ರಕರಣವನ್ನು ಮುಕ್ತಾಯಗೊಳಿಸುತ್ತಾರೆ.
ಮುಸುಕುಧಾರಿ ಗೂಂಡಾಗಳಿಂದ ಜೆಎನ್ಯು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ಹಾಗೂ ಸಿಎಎ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನಾಕಾರರ ಮೇಲೆ ನಡೆದಿದ್ದ ದಾಳಿಯನ್ನು ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 2,000 ಪ್ರತಿಭಟನಾಕಾರರು ಜ.7ರಂದು ಗೇಟ್ವೇ ಆಫ್ ಇಂಡಿಯಾದ ಬಳಿ ಸೇರಿದ್ದರು. ಈ ಸಂದರ್ಭ ‘ಫ್ರೀ ಕಾಶ್ಮೀರ ’ ಪೋಸ್ಟರ್ನ್ನು ಪ್ರದರ್ಶಿಸಿದ್ದ ಮೆಹಕ್ ಮಿರ್ಝಾ ಪ್ರಭು ವಿರುದ್ಧ ಕೊಲಾಬಾ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಗೇಟ್ವೇ ಆಫ್ ಇಂಡಿಯಾ ಬಳಿ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ 36 ಜನರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು,ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಗರದ ಕೆಲವು ನ್ಯಾಯವಾದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಆರೋಪಿಗಳಲ್ಲಿ ಸೇರಿದ್ದಾರೆ.
ಪ್ರಕರಣದಲ್ಲಿ ಈವರೆಗೆ 29 ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.







