ಬ್ರಿಟನ್‌ನಿಂದ ಉಡುಪಿ ಜಿಲ್ಲೆಗೆ ಬಂದ ಎಲ್ಲಾ 36 ಮಂದಿಯ ಕೊರೋನ ನೆಗೆಟಿವ್
ಉಡುಪಿ, ಡಿ.29: ರೂಪಾಂತರಿತ ಕೊರೋನ ವೈರಸ್ ಕಂಡುಬಂದಿರುವ ಬ್ರಿಟಿನ್‌ನಿಂದ ಈವರೆಗೆ ಒಟ್ಟು 36 ಮಂದಿ ಉಡುಪಿ ಜಿಲ್ಲೆಗೆ ಆಗಮಿ ಸಿದ್ದು, ಇವರೆಲ್ಲರ ಆರ್‌ಟಿ-ಪಿಸಿಆರ್ ಪರೀಕ್ಷೆ ನೆಗೆಟಿವ್ ಫಲಿತಾಂಶವನ್ನು ನೀಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೆಗೆಟಿವ್ ಬಂದಿ ರುವ ಇವರೆಲ್ಲರನ್ನೂ 14 ದಿನಗಳ ಹೋಮ್ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈ ಅವಧಿಯಲ್ಲಿ ಅವರ ನಮ್ಮ ವೈದ್ಯರ ನಿಗಾದಲ್ಲಿ ಇರುವರು ಎಂದು ಜಗದೀಶ್ ನುಡಿದರು.
ಈ 36 ಮಂದಿಗೆ ಒಟ್ಟು 47 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ. ಇವರೆಲ್ಲರನ್ನು ಸಹ ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರು ಸಹ ನೆಗೆಟಿವ್ ಬಂದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬ್ರಿಟನ್‌ನಿಂದ ಬಂದವರಿಂದ ಸೋಂಕು ಹರಡುವ ಅಪಾಯ ಇಲ್ಲವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲೀಗ ಕೇವಲ 66 ಮಂದಿ ಸಕ್ರೀಯ ಪ್ರಕರಣಗಳಿವೆ. ಇವುಗಳಲ್ಲಿ 40 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದರೆ, ಉಳಿದ 26 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದರು. ಮೊದಲೆಲ್ಲ ಶೇ.20ಕ್ಕಿಂತ ಅಧಿಕವಿದ್ದ ಪಾಸಿಟಿವ್ ರೇಟ್ ಈಗ ತೀರಾ ಕಡಿಮೆ ಯಾಗಿದ್ದು, ಅದು ಪ್ರತಿದಿನ ಶೇ.0.72ರ ಆಸುಪಾಸಿನಲ್ಲಿದೆ. ಹಿಂದಿನಂತೆ ಈಗಲೂ ಪ್ರತಿದಿನ ಸರಾಸರಿ 1500 ಮಂದಿ ಕೋವಿಡ್ ಪರೀಕ್ಷೆಗೊಳ ಗಾಗುತಿದ್ದು, ಪಾಸಿಟಿವ್ ಬರುವವರ ಸಂಖ್ಯೆ 10ರೊಳಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲೀಗ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಶೇ.98.90 ಆಗಿದ್ದು, ಹೋಮ್ ಐಸೋಲೇಷನ್‌ನಲ್ಲಿದ್ದು ಗುಣಮುಖ ರಾಗುವವರ ಪ್ರಮಾಣ ಶೇ.99.67ಆಗಿದೆ. ಜಿಲ್ಲೆಯಲ್ಲೀಗ ಮರಣ ಪ್ರಮಾಣ ಶೇ.0.82ಕ್ಕಿಳಿದಿದೆ ಎಂದು ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದರು.
ಕೋವಿಡ್‌ನ ಗುಣಲಕ್ಷಣವಿದ್ದು, ಆಸ್ಪತ್ರೆಗಳಿಗೆ ಭೇಟಿ ನೀಡುವ ಎಲ್ಲಾ ರೋಗಿಗಳಿಗೂ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಈ ಬಗ್ಗೆ ಎಲ್ಲಾ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ. ಅದೇ ರೀತಿ 50+ ವಯಸ್ಸಿನವರಿಗೂ ಸಹ ಈ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡುವಂತೆ ತಿಳಿಸಲಾ ಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 2,16,640 ಮಂದಿ ಕೋವಿಡ್ ಪರೀಕ್ಷೆಗೊಳಗಾದರೆ, ಭಾರತದಲ್ಲಿ ಈ ಸಂಖ್ಯೆ 1,24,983 ಹಾಗೂ ಕರ್ನಾಟಕದಲ್ಲಿ 2,09,000 ಮಂದಿಯ ಪರೀಕ್ಷೆ ನಡೆದಿದೆ ಎಂದು ಅವರು ವಿವರಿಸಿದರು.







