‘ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ’ ಸರಕಾರದ ಹೇಡಿತನ: ಸಿದ್ದರಾಮಯ್ಯ

ಬೆಂಗಳೂರು, ಡಿ.29: ವಿಧಾನಮಂಡಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಚರ್ಚೆಯನ್ನೇ ಮಾಡದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಸರಕಾರದ ಹೇಡಿತನವನ್ನು ತೋರಿಸುತ್ತದೆ. ಚರ್ಚೆ ಮಾಡಿದರೆ ಈ ಮಸೂದೆಯ ಹಿಂದಿನ ದುರುದ್ದೇಶಗಳು ಅನಾವರಣಗೊಂಡು ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯ ರಾಜ್ಯ ಬಿಜೆಪಿ ನಾಯಕರಿಗೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದ್ದಾರೆ.
ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಬೇಕು ಮತ್ತು ಗೋರಕ್ಷಣೆಯ ಹೆಸರಲ್ಲಿ ಪುಂಡಾಟಿಕೆ ನಡೆಸುವವರಿಗೆ ರಕ್ಷಣೆ ಕೊಡಬೇಕು ಎಂಬ ಎರಡು ದುರುದ್ದೇಶಗಳನ್ನು ಬಿಟ್ಟರೆ ಗೋಹತ್ಯೆ ನಿಷೇಧ ಮಸೂದೆಗೆ ಗೋವಿನ ಬಗ್ಗೆ ಭಕ್ತಿಯಾಗಲಿ, ಕಾಳಜಿಯಾಗಲಿ ಇಲ್ಲ ಎಂದು ಟೀಕಿಸಿದ್ದಾರೆ.
ಗೋಹತ್ಯೆಗೆ ನಿಷೇಧವಂತೆ, ಗೋಮಾಂಸ ಮಾರಾಟ ಮತ್ತು ಸೇವನೆಗೆ ನಿರ್ಬಂಧ ಇಲ್ಲವಂತೆ. ಇಂತಹದ್ದೊಂದು ಎಡಬಿಡಂಗಿ ಕಾನೂನು ಮಾಡಲು ಇಷ್ಟೆಲ್ಲಾ ನಾಟಕ ಮಾಡಬೇಕೇ? ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಮಾರಾಟ ಮಾಡಲು ಗೋಮಾಂಸವನ್ನು ಆಮದು ಮಾಡಿಕೊಳ್ತಿರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದಾಗಿ ರೈತರು ಮಾತ್ರ ಅಲ್ಲ, ಚರ್ಮದ ಉತ್ಪನ್ನಗಳ ತಯಾರಿಕೆಗೆ ಚರ್ಮದ ಕೊರತೆ ಎದುರಾಗಲಿದ್ದು, ಉತ್ಪಾದನೆ ಕುಂಠಿತಗೊಳ್ಳಲಿದೆ. ಇದರಿಂದ ನೇರವಾಗಿ ಮತ್ತು ಪರೋಕ್ಷವಾಗಿ ಈ ಕಸುಬನ್ನು ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳು ಉದ್ಯೋಗ ಕಳೆದುಕೊಂಡು ಬೀದಿಪಾಲಾಗಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂದೆಲ್ಲ ಹೇಳುವವರು ಕನಿಷ್ಠ ದೇಶಕ್ಕೆಲ್ಲ ಅನ್ವಯವಾಗುವಂತಹ ಸಮಾನ ಗೋಹತ್ಯೆ ನಿಷೇಧ ಕಾನೂನು ತರಬಾರದೇಕೆ? ನಿಮಗೆ ತಾಕತ್ತಿದ್ದರೆ ಬಿಜೆಪಿ ಆಡಳಿತ ಇರುವ ಗೋವಾ, ಈಶಾನ್ಯ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತನ್ನಿ. ಗೋಮಾಂಸ ರಫ್ತು ಮಾಡುವುದನ್ನು ಸಂಪೂರ್ಣ ನಿಷೇಧಿಸಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ವಯಸ್ಸಾದ ಹಸುಗಳ ಪಾಲನೆಯ ಜವಾಬ್ದಾರಿಯನ್ನು ರಾಜ್ಯ ಸರಕಾರವೇ ಹೊರಲಿದೆ ಎಂದು ಹೇಳಿದ್ದೀರಿ. ರಾಜ್ಯದಲ್ಲಿ ಎಷ್ಟು ಸರಕಾರವೇ ನಡೆಸುತ್ತಿರುವ ಗೋಶಾಲೆಗಳಿವೆ? ಎಷ್ಟು ಹೊಸ ಗೋಶಾಲೆಗಳನ್ನು ತೆರೆಯಲಿದ್ದೀರಿ? ಇದಕ್ಕಾಗಿ ಎಷ್ಟು ಹಣ ಒದಗಿಸಿದ್ದೀರಿ? ಈ ವಿವರಗಳನ್ನು ಮೊದಲು ಬಹಿರಂಗಪಡಿಸಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.







