ರಾಜಕೀಯ, ಸಾರ್ವಜನಿಕ ವಲಯದಲ್ಲಿ ವಿಶ್ಲೇಷಣೆ, ತೀವ್ರ ಚರ್ಚೆಗೆ ಗ್ರಾಸವಾದ ಧರ್ಮೇಗೌಡರ ನಿಗೂಢ ಸಾವು
ಉಪಸಭಾಪತಿಯ ಸಾವಿಗೆ ಕಾರಣವಾಯಿತೇ ಮೇಲ್ಮನೆಯ ಗದ್ದಲ ?

ಬೆಂಗಳೂರು, ಡಿ. 29: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ವಿಶ್ಲೇಷಣೆ, ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಡಿ.15ರಂದು ಕರೆದಿದ್ದ ಮೇಲ್ಮನೆ ವಿಶೇಷ ಅಧಿವೇಶನ ಕಲಾಪದಲ್ಲಿನ ಘಟನಾವಳಿಗಳೇ ಮೂಲ ಕಾರಣ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಸಜ್ಜನ, ಸನ್ನಡತೆಯುಳ್ಳ, ಹಿರಿಯ ರಾಜಕಾರಣಿಯೂ ಆಗಿದ್ದ ಧರ್ಮೇಗೌಡ ಅವರು ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೋ ಅಥವಾ ಕೊಲೆಯೋ ಎಂಬ ಸಂಶಯವೂ ವ್ಯಕ್ತವಾಗುತ್ತಿದೆ. ಜತೆಗೆ ಅವರ ಸಾವಿಗೂ ಮುನ್ನ ಬರೆದಿರುವ ಎರಡು ಪುಟಗಳ ಡೆತ್‍ನೋಟ್‍ವೊಂದು ರೈಲ್ವೆ ಹಳಿಗಳ ಮೇಲಿದ್ದ ಅವರ ಮೃತದೇಹದ ಬಳಿಯೇ ಪೊಲೀಸರಿಗೆ ಸಿಕ್ಕಿದ್ದು, ವಿವಿಧ ದೃಷ್ಟಿಕೋನಗಳಿಂದ ತನಿಖೆ ಕೈಗೊಂಡಿದ್ದಾರೆ.
ಜಟಾಪಟಿಯಿಂದ ನೊಂದಿದ್ದ ಧರ್ಮೇಗೌಡ: ಡಿ.15ರಂದು ‘ಗೋಹತ್ಯೆ ನಿಷೇಧ ಮಸೂದೆ' ಮಂಡನೆ ಹಾಗೂ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಚರ್ಚೆ ಸಂಬಂಧ ಕರೆದಿದ್ದ ವಿಧಾನ ಪರಿಷತ್ ವಿಶೇಷ ಅಧಿವೇಶನದ ವೇಳೆ ‘ಕೋರಂ ಬೆಲ್ ನಿಲ್ಲುವ ಮೊದಲೇ' ಸಭಾಪತಿ ಪೀಠದಲ್ಲಿ ಆಸೀನರಾಗಿದ್ದ ಧರ್ಮೇಗೌಡ ಅವರನ್ನು ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ತಳ್ಳಾಡಿದ್ದರು.
ಅಲ್ಲದೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿಯವರು, ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರಿಗೆ ನೀಡಿದ್ದ ವರದಿಯಲ್ಲಿ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ವಿರುದ್ಧ ಹೊರಿಸಿದ್ದರೆನ್ನಲಾದ ಆರೋಪಗಳ ಹಿನ್ನೆಲೆಯಲ್ಲಿ ಅವರು ತುಂಬಾ ನೊಂದಿದ್ದರು. ಈ ಕುರಿತು ಅವರು ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಅಂದು ಆಗಿದ್ದೇನು?: ಡಿ.15ರಂದು ಗೋಹತ್ಯೆ ನಿಷೇಧ ಮಸೂದೆ ಮಂಡನೆ ಹಾಗೂ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ವಿಶೇಷ ಅಧಿವೇಶನ ಕರೆಯಲಾಗಿತ್ತು. ನಿಗದಿಯಂತೆ 11:15ರ ಸುಮಾರು ಕಲಾಪ ಆರಂಭಕ್ಕೆ ಕೋರಂ ಬೆಲ್ ಹಾಕಲಾಗಿತ್ತು. ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಮೇಲ್ಮನೆಯಲ್ಲಿನ ತಮ್ಮ ಕೊಠಡಿಯಲ್ಲಿದ್ದರು.
ಈ ವೇಳೆ ಬಿಜೆಪಿ ಸದಸ್ಯರು, ಅವಿಶ್ವಾಸ ನಿರ್ಣಯ ಮಂಡನೆ ಹಿನ್ನೆಲೆಯಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಕಲಾಪಕ್ಕೆ ಆಗಮಿಸದಂತೆ ಬಾಗಿಲು ಬಂದ್ ಮಾಡಿದರು. ಈ ಮಧ್ಯೆ ಕೋರಂ ಬೆಲ್ ನಿಲ್ಲುವ ಮೊದಲೇ ಸಭಾಪತಿ ಪೀಠದಲ್ಲಿ ಉಪಸಭಾಪತಿ ಧರ್ಮೇಗೌಡ ಅವರನ್ನು ಬಿಜೆಪಿ ಕೂರಿಸಲು ಮುಂದಾಗಿತ್ತು. ಇದರಿಂದ ಕೆರಳಿದ ಪ್ರತಿಪಕ್ಷ ಕಾಂಗ್ರೆಸ್‍ನ ಕೆಲ ಸದಸ್ಯರು ಧರ್ಮೇಗೌಡ ಅವರನ್ನು ಸಭಾಪತಿ ಪೀಠದಿಂದ ರಟ್ಟೆ ಹಿಡಿದು ಎಳೆದಾಡಿದ್ದರು.
ಈ ಗದ್ದಲ, ಕೋಲಾಹಲ, ಗೊಂದಲಗಳ ನಡುವೇ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರನ್ನು ದಿಗ್ಬಂಧನದಿಂದ ಬಿಡಿಸಿದ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠಕ್ಕೆ ಕರೆತಂದಿದ್ದರು. ಇದೇ ವೇಳೆ ಸಭಾಪತಿ ಸದನವನ್ನು ಅನಿದಿಷ್ಟಾವಧಿ ಮುಂದೂಡಿದ್ದರು. ಈ ಗದ್ದಲವು ಹಿರಿಯರ ಮನೆ ಎಂಬ ಹಿರಿಮೆ-ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೇಲ್ಮನೆಗೆ ‘ಕಪ್ಪುಚುಕ್ಕೆ'ಯನ್ನಿಟ್ಟಿತ್ತು.
ಇಡೀ ಘಟನೆಗೆ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸಹಿತ ಮೇಲ್ಮನೆ ಎಲ್ಲ ಸದಸ್ಯರು ಜವಾಬ್ದಾರರಾಗಿದ್ದರೂ ಉಪಸಭಾಪತಿ ಧರ್ಮೇಗೌಡ ಅವರತ್ತಲೇ ಬೆರಳು ಮಾಡಲಾಗಿತ್ತು. ಅಲ್ಲದೆ, ಈ ಘಟನೆ ಸತ್ಯಾಸತ್ಯತೆಗಳನ್ನು ಹೊರಗಿಡಲು ಸಮಿತಿ ರಚನೆ ಮಾಡಲು ಶಿಫಾರಸು ಮಾಡಿದ್ದು, ಪರಿಷತ್ತಿನ ಸದಸ್ಯರಾದ ಜೆಡಿಎಸ್‍ನ ಮರಿತಿಬ್ಬೇಗೌಡ ಅವರನ್ನು ಅಧ್ಯಕ್ಷರನ್ನಾಗಿ ನಿಯೋಜನೆ ಮಾಡಲಾಗಿತ್ತು ಎಂದು ಗೊತ್ತಾಗಿದೆ.
‘ಪರಿಷತ್‍ನಲ್ಲಿ ಡಿ.15ರಂದು ನಡೆದ ಘಟನೆಯ ಹಿನ್ನಲೆಯಲ್ಲಿ ಧರ್ಮೇಗೌಡರು ತೀವ್ರವಾಗಿ ನೊಂದಿದ್ದರು. ಆದರೆ, ನೀನು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಬಹಳ ನೊಂದುಕೊಳ್ಳುವುದು ಬೇಡ. ಧೈರ್ಯ ತೆಗೆದುಕೊಳ್ಳಿ ಎಂದು ಧರ್ಮೇಗೌಡ ಅವರಿಗೆ ನಾನೇ ಖುದ್ದು ದೂರವಾಣಿ ಕರೆ ಮಾಡಿ ಮಾತನಾಡಿದ್ದೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸಾಲಗಾರರ ಒತ್ತಡವಿತ್ತೇ?: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಚಿಕ್ಕಮಗಳೂರಿನಲ್ಲಿ ಹೊಸ ಮನೆಯೊಂದರ ನಿರ್ಮಾಣ, ಚುನಾವಣಾ ವೆಚ್ಚಕ್ಕೆ ಹೆಚ್ಚಿನ ಮೊತ್ತದ ಸಾಲವು ಧರ್ಮೇಗೌಡ ಅವರಿಗಿತ್ತು ಎನ್ನಲಾಗುತ್ತಿದ್ದು, ಈ ಸಂಬಂಧ ಸಾಲಗಾರರ ಕಿರುಕುಳದ ಹಿನ್ನೆಲೆಯಲ್ಲಿ ಮನನೊಂದು ಅವರು ಆತ್ಮಹತ್ಯೆಯಂತಹ ತೀರ್ಮಾನಕ್ಕೆ ಬಂದರೇ ಎಂಬ ಪ್ರಶ್ನೆಯೂ ಕಾಡುತ್ತಿದೆ. ಅಲ್ಲದೆ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಗೊಂದಲಗಳಿದ್ದವು ಎನ್ನಲಾಗುತ್ತಿದೆ. ಎಲ್ಲ ಪ್ರಶ್ನೆಗಳಿಗೆ ಖುದ್ದು ಅವರೇ ಸಾವಿಗೆ ಮುನ್ನ ಬರೆದಿದ್ದ ಡೆತ್‍ನೋಟ್ ಮತ್ತು ಪೊಲೀಸರ ತನಿಖೆಯಿಂದ ಸ್ಪಷ್ಟ ಉತ್ತರ ಸಿಗಬೇಕಿದೆ.
ಒಂದು ದಿನದ ರಜೆ
‘ವಿಧಾನ ಪರಿಷತ್ತಿನ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ನಿನ್ನೆ ತಡರಾತ್ರಿ ನಿಧನರಾಗಿದ್ದು ಪರಿಷತ್ ಸಚಿವಾಲಯವು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ದಿವಂಗತರ ಗೌರವಾರ್ಥ ಡಿ.29ರಂದು ಶೋಕಾಚರಣೆ ಆಚರಿಸುವ ಜೊತೆಗೆ ಪರಿಷತ್ ಸಚಿವಾಲಯಕ್ಕೆ ಒಂದು ದಿನದ ರಜೆ ಘೋಷಿಸಲು ಆದೇಶಿಸಲಾಗಿದೆ. ಶೋಕಾಚರಣೆ ಅವಧಿಯಲ್ಲಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ'
-ಪ್ರತಾಪಚಂದ್ರ ಶೆಟ್ಟಿ, ಸಭಾಪತಿ, ವಿಧಾನ ಪರಿಷತ್







