ವಲಸಿಗರ ಸಮೀಕ್ಷೆಗೆ ಮುಂದಾದ ರಾಜ್ಯ ಸರಕಾರ: ವಿವಿಧ ಯೋಜನೆಗಳ ಮೂಲಕ ಸಾಮಾಜಿಕ ಭದ್ರತೆ ನೀಡಲು ಚಿಂತನೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.29: ರಾಜ್ಯಾದ್ಯಂತ ಕೊರೋನ ಕಾರಣದಿಂದಾಗಿ ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ವಾಪಸ್ಸಾಗಿರುವವರ ಸಮೀಕ್ಷೆಗೆ ಮುಂದಾಗಿರುವ ಸರಕಾರ, ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಚಿಂತನೆ ನಡೆಸಿದೆ.
ಕೊರೋನ ವೈರಸ್ ಹರಡುವಿಕೆಯನ್ನು ತಪ್ಪಿಸುವ ಸಲುವಾಗಿ ಮಾರ್ಚ್ ನಲ್ಲಿ ಸರಕಾರ ಲಾಕ್ಡೌನ್ ಘೋಷಿಸಿದ ವೇಳೆ ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಲಕ್ಷಾಂತರ ಜನರು ಗ್ರಾಮೀಣ ಪ್ರದೇಶಕ್ಕೆ ವಾಪಸ್ಸಾಗಿದ್ದರು. ಹೀಗೆ ಗ್ರಾಮಗಳಿಗೆ ಮರಳಿರುವವರಿಗೆ ಸರಕಾರದ ವಿವಿಧ ಯೋಜನೆಗಳ ಮೂಲಕ ಸಾಮಾಜಿಕ ಭದ್ರತೆ ಕಲ್ಪಿಸಲು ಸರಕಾರ ಮುಂದಾಗಿದೆ.
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಮೀಕ್ಷೆ ನಡೆಸಲು ಜವಾಬ್ದಾರಿ ವಹಿಸಲಾಗಿದೆ. ಈ ಸಮೀಕ್ಷೆಯು ಒಂದು ತಿಂಗಳ ಹಿಂದೆಯೇ ನಡೆಯಬೇಕಿತ್ತಾದರೂ, ಗ್ರಾಮ ಪಂಚಾಯತ್ ಚುನಾವಣೆಗಳು ಎದುರಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಡಿ.30ಕ್ಕೆ ಚುನಾವಣಾ ನೀತಿಸಂಹಿತೆ ಮುಗಿಯುವ ಹಿನ್ನೆಲೆಯಲ್ಲಿ ಸಮೀಕ್ಷೆ ಕೆಲಸವೂ ಸುಗಮವಾಗಿ ಆರಂಭವಾಗಲಿದೆ ಎನ್ನಲಾಗಿದೆ.
ಇಲಾಖೆಯ ಅಧಿಕಾರಿಗಳು ವಲಸೆ ಹೋಗಿ ವಾಪಸ್ಸಾಗಿರುವ ಮಂದಿಯ ಹೆಸರು, ವಿಳಾಸ, ನಗರ ಪ್ರದೇಶಗಳಲ್ಲಿ ಮಾಡುತ್ತಿದ್ದ ನೌಕರಿ, ಈಗ ಉದ್ಯೋಗ ಮಾಡುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ವಿಸ್ತೃತ ಮಾಹಿತಿ ಕಲೆ ಹಾಕಲಿದ್ದಾರೆ. ಸರಕಾರದ ಬಳಿ ಇರುವ ಮಾಹಿತಿ, ಅಂಕಿ-ಅಂಶಗಳ ಪ್ರಕಾರ ಮೇ ತಿಂಗಳವರೆಗೆ ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ 3.5 ಲಕ್ಷ ಜನರು ವಾಪಸ್ಸಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ವಲಸಿಗರ ಸಮೀಕ್ಷೆ ಆ್ಯಪ್: ವಲಸಿಗರ ಆರೋಗ್ಯ, ಆರ್ಥಿಕ, ಸಾಮಾಜಿಕ ಸ್ಥಿತಿಗಳ ಬಗ್ಗೆಯೂ ಮಾಹಿತಿ ಕಲೆಹಾಕಲಿದ್ದು, ಅವರ ಅಗತ್ಯತೆಗಳನ್ನು ಗುರುತಿಸುವುದಕ್ಕೆ ಸಹಕಾರಿಯಾಗಲಿದೆ. ಸರಕಾರದ ವಿವಿಧ ಯೋಜನೆಗಳ ಮೂಲಕ ಪರಿಹಾರ ಒದಗಿಸುವುದಕ್ಕೂ ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಅದಕ್ಕಾಗಿ ಕರ್ನಾಟಕ ವಲಸಿಗರ ಟ್ರ್ಯಾಕಿಂಗ್ ಮತ್ತು ಸಾಮಾಜಿಕ ಸಂರಕ್ಷಣಾ ಚೌಕಟ್ಟು ('Karnataka Migrants Tracking & Social Protection Framework ಎಂಬ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಸಿಬ್ಬಂದಿಗಳಿಗೆ ಮೊಬೈಲ್ ಆ್ಯಪ್ಗೆ ವಿವರಗಳನ್ನು ಫೀಡ್ ಮಾಡುವ ಕೆಲಸವನ್ನು ವಹಿಸಲಾಗಿದೆ. ಈ ಸಮೀಕ್ಷೆ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪಂಚಾಯತ್ ರಾಜ್ನ ಆಯುಕ್ತ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.







