ಇರಾನ್‌ನಿಂದ ಸ್ವದೇಶಿ ನಿರ್ಮಿತ ಕೋವಿರಾನ್ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ಆರಂಭ

ಟೆಹರಾನ್,ಡಿ.29: ತಾನು ಅಭಿವೃದ್ಧಿಪಡಿಸಿರುವ ನೂತನ ಕೊರೋನ ವೈರಸ್ ಲಸಿಕೆ ‘ಕೋವಿರಾನ್’ನ ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಚೊಚ್ಚಲ ಅಧ್ಯಯನವನ್ನು ಇರಾನ್ ಮಂಗಳವಾರ ಆರಂಭಿಸಿದೆ. ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲೇ ಅತ್ಯಧಿಕವಾಗಿ ಕೋವಿಡ್-19ನಿಂದ ಬಾಧಿತ ರಾಷ್ಟ್ರವಾದ ಇರಾನ್, ಆಂತರಿಕವಾಗಿ ಅಭಿವೃದ್ಧಿ ಪಡಿಸಿರುವ ಈ ಲಸಿಕೆಯನ್ನು ಡಜನ್‌ಗಟ್ಟಲೆ ಮಂದಿಗೆ ನೀಡಲಾಗಿದೆಯೆಂದು ಮೂಲಗಳು ತಿಳಿಸಿವೆ.
ಸರಕಾರಿ ಸ್ವಾಮ್ಯದ ಫಾರ್ಮಾಸ್ಯೂಟಿಕಲ್ ಸಂಸ್ಥೆ ಶಿಫಾ ಫಾರ್ಮಾಡ್, ಕೊರೋನ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ಇರಾನ್‌ನಲ್ಲಿ ಪ್ರಪ್ರಥಮ ಬಾರಿಗೆ ಮಾನವರ ಮೇಲೆ ನಡೆಸಿದೆ.
ಅನ್ಯ ದೇಶದ ಸಹಕಾರದೊಂದಿಗೆ ಇನ್ನೊಂದು ಕೊರೋನ ಲಸಿಕೆಯನ್ನು ಇರಾನ್ ತಯಾರಿಸುತ್ತಿದ್ದು,ಫೆಬ್ರವರಿಯಲ್ಲಿ ಮಾನವ ಸ್ವಯಂಸೇವಕರ ಮೇಲೆ ಅದರ ಪ್ರಾಯೋಗಿಕ ಪರೀಕ್ಷೆ ನಡೆಯುವ ನಿರೀಕ್ಷೆಯಿದೆ ಎಂದು ಇರಾನ್ ಅಧ್ಯಕ್ಷ ಹಸ್ಸನ್ ರೂಹಾನಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ಇರಾನ್‌ನಲ್ಲಿ ಈವರೆಗೆ 10.20 ಲಕ್ಷ ಮಂದಿ ಕೊರೋನ ಸೋಂಕಿತರಾಗಿದ್ದು, ಅವರಲ್ಲಿ 55 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.
ಮೊದಲ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ, ಎರಡು ವಾರಗಳ ಅವಧಿಯಲ್ಲಿ 56ಮಂದಿ ಸ್ವಯಂಸೇವಕರಿಗೆ ಲಸಿಕೆಯನ್ನು ನೀಡಲಾಗುವುದು ಎಂದು ಕ್ಲಿನಿಕಲ್ ಟ್ರಯಲ್ ಮ್ಯಾನೇಜರ್ ಹಮೀದ್ ಹೊಸ್ಸೆನಿ ತಿಳಿಸಿದ್ದಾರೆ.
ರಾಜಧಾನಿ ಟೆಹರಾನ್ ಹೊಟೇಲೊಂದರಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಒಟ್ಟು ಮೂರು ಮಂದಿಗೆ ಲಸಿಕೆಗಳನ್ನು ನೀಡಲಾಗಿದೆ. ಇರಾನ್‌ನ ಆರೋಗ್ಯ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲಸಿಕೆಯ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳನ್ನು ಎರಡನೆ ಶಾಟ್ ನೀಡಿದ ಬಳಿಕ ಒಂದು ತಿಂಗಳೊಳಗೆ ಪ್ರಕಟಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇರಾನ್‌ನ ಬರೆಕಾತ್ ಫಾರ್ಮಾಸ್ಯೂಟಿಕಲ್ ಗ್ರೂಪ್‌ನ ಅಧ್ಯಕ್ಷರ ಪುತ್ರಿ ತಯ್ಯೆಬಾ ಮೊಖಾಬಿರ್ ಈ ಲಸಿಕೆಯನ್ನು ಸ್ವೀಕರಿಸಿದ ಮೊದಲಿಗರಾಗಿದ್ದಾರೆ.







