ಸಹಕಾರಿ ರತ್ನ ಧರ್ಮೇಗೌಡ ರಾಜಕೀಯ ಕ್ಷೇತ್ರದಲ್ಲಿ ಬಿಟ್ಟು ಹೋದ ಹೆಜ್ಜೆ ಗುರುತುಗಳು...

ಚಿಕ್ಕಮಗಳೂರು, ಡಿ.29: ಅಕಾಲಿಕವಾಗಿ ಸಾವಿಗೀಡಾದ ವಿಧಾನ ಪರಿಷತ್ ಉಪಸಭಾಪತಿ, ಜೆಡಿಎಸ್ ಪಕ್ಷದ ಹಿರಿಯ ನಾಯಕ, ಸಹಕಾರಿ ಧುರೀಣ ಎಸ್.ಎಲ್.ಧರ್ಮೇಗೌಡ ನಿಧನದ ಸುದ್ದಿಗೆ ಕಾಫಿನಾಡು ಸ್ತಬ್ಧವಾಗಿದ್ದು, ಅಭಿಮಾನಿಗಳು, ಕಾರ್ಯಕರ್ತರು, ಸ್ನೇಹಿತರು ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.
1955ರಲ್ಲಿ ಸಖರಾಯಪಟ್ಟದ ಸರಪನಹಳ್ಳಿ ಗ್ರಾಮದಲ್ಲಿ ಮಾಜಿ ಶಾಸಕ ದಿ.ಲಕ್ಷ್ಮಯ್ಯ-ಕೃಷ್ಣಮ್ಮ ದಂಪತಿಯ ಎರಡನೇ ಮಗನಾಗಿ ಧರ್ಮೇಗೌಡ ಜನಿಸಿದರು. ಚಿಕ್ಕಮಗಳೂರು ನಗರದ ಐಡಿಎಸ್‍ಜಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಅವರು, ತಂದೆಯ ಗರಡಿಯಲ್ಲಿ ರಾಜಕೀಯದಲ್ಲಿ ಪಳಗಿ ಕಾಲೇಜು ದಿನಗಳಲ್ಲೇ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಜನತಾ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶ ಪಡೆದರು.
ಮೊದಲ ಬಾರಿಗೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲುಹಳ್ಳಿ ಮಂಡಲ ಪಂಚಾಯತ್‍ನ ಸದಸ್ಯರಾಗಿ ನಂತರ ಪ್ರಧಾನರಾಗಿ ಆಯ್ಕೆಯಾಗಿದ್ದ ಅವರು, 1995ರಿಂದ 2000ರವರೆಗೂ ಲಿಂಗದಹಳ್ಳಿ ಕ್ಷೇತ್ರದ ಜಿಪಂ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಇದೇ ವೇಳೆ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ದೇವನೂರು ಕ್ಷೇತ್ರದಿಂದ ಮತ್ತೊಮ್ಮೆ ಧರ್ಮೇಗೌಡ ಜಿಪಂ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಆ ಬಳಿಕ ಸಹಕಾರಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಅವರು ಚಿಕ್ಕಮಗಳೂರು ಜಿಲ್ಲಾದ್ಯಂತ ಪಕ್ಷ ಸಂಘಟನೆಯೊಂದಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ರೈತಪರ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದ್ದರು.
ಜಿಲ್ಲೆ ಹಾಗೂ ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಅವರು, ಆರಂಭದಲ್ಲಿ ಕಡೂರು ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷರಾಗಿ ಸಹಕಾರಿ ಪಿ.ಸಿ.ಎ.ಆರ್.ಡಿ ಬ್ಯಾಂಕ್ ನಿರ್ದೇಶಕರಾಗಿ, ಹಾಸನ ಹಾಲು ಒಕ್ಕೂಟ, ಮಿಲ್ಕ್ ಫೆಡರೇಷನ್‍ನ ನಿರ್ದೇಶಕ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ ಅಪೆಕ್ಸ್ ಬ್ಯಾಂಕ್‍ನ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿದರು. ಇದೇ ವೇಳೆ ದಿಲ್ಲಿಯ ರಾಷ್ಟ್ರೀಯ ಇಫ್ಕೋ, ನಾಫೆಡ್, ಎನ್‍ಸಿಡಿಸಿ ಐಪಿಸಿಎಲ್‍ನಂತಹ ಉನ್ನತ ಸಂಸ್ಥೆಗಳಲ್ಲೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಸಹಕಾರಿ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಪರಿಗಣಿಸಿ ಸರಕಾರ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಚಿಕ್ಕಮಗಳೂರು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ ಧೀರ್ಘಕಾಲ ಸೇವೆ ಸಲ್ಲಿಸಿದ್ದ ಅವರ ಆಡಳಿತದಿಂದಾಗಿ ಡಿಸಿಸಿ ಬ್ಯಾಂಕ್ ರಾಜ್ಯದ ಅತ್ಯುತ್ತಮ ಸಹಕಾರಿ ಬ್ಯಾಂಕ್ ಎಂಬ ಗೌರವಕ್ಕೆ ಪಾತ್ರವಾಗುವಂತಾಗಿತ್ತು. ಇತ್ತೀಚಿಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವರು ನಿರ್ದೇಶಕರಾಗಿ ಆಯ್ಕೆಯಾದರಾದರೂ ಡಿಸಿಸಿ ಬ್ಯಾಂಕ್ ಅಧಿಕಾರ ಬಿಜೆಪಿ ಪಾಲಾಗಿತ್ತು.
2004ರಲ್ಲಿ ಬೀರೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಗೊಂಡಿದ್ದ ಎಸ್.ಎಲ್.ಧರ್ಮೇಗೌಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ವಿಧಾನಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದರು. ನಂತರ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು, 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಧರ್ಮೇಗೌಡ ಅವರು ವಿಧಾನ ಪರಿಷತ್‍ಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಎಚ್‍ಡಿಕೆ ಕೃಪಾಕಟಾಕ್ಷದಿಂದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಉಪಸಭಾಪತಿಯಾಗಿಯೂ ಆಯ್ಕೆಯಾಗಿದ್ದರು. ನಂತರ ನಡೆದ ರಾಜಕೀಯ ಬೆಳವಣಿಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಅವಧಿಯಲ್ಲೂ ವಿಧಾನ ಪರಿಷತ್ ಉಪಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇತ್ತೀಚೆಗೆ ವಿಧಾನ ಪರಿಷತ್ ಕಲಾಪದ ವೇಳೆ ಸಭಾಪತಿ ಸ್ಥಾನದಲ್ಲಿ ಕೂತಿದ್ದಕ್ಕೆ ಕೈ ಶಾಸಕರು ಹಾಗೂ ಬಿಜೆಪಿ ಶಾಸಕರ ನಡುವೆ ನಡೆದ ಗಲಾಟೆಯಿಂದಾಗಿ ತೀವ್ರವಾಗಿ ನೊಂದಿದ್ದ ಧರ್ಮೇಗೌಡ ತಮ್ಮ ಆಪ್ತರ ಬಳಿ ನೋವು ಹೇಳಿಕೊಂಡಿದ್ದರೆಂದು ತಿಳಿದುಬಂದಿದೆ. ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ವೇಳೆ ಈ ಘಟನೆಯನ್ನು ಡೆತ್‍ನೋಟ್‍ನಲ್ಲಿ ಧರ್ಮೇಗೌಡ ಬರೆದಿಟ್ಟುಕೊಂಡಿದ್ದರು.
ದೇವೇಗೌಡ ಕುಟುಂಬಕ್ಕೆ ಆಪ್ತವಾಗಿದ್ದ ಧರ್ಮೇಗೌಡ ಕುಟುಂಬ: ಧರ್ಮೇಗೌಡ ಅವರ ತಂದೆ ದಿವಂಗತ ಲಕ್ಷ್ಮಯ್ಯ ಜನತಾ ಪಕ್ಷದ ಕಟ್ಟಾಳುವಾಗಿದ್ದರು. ಬೀರೂರು ವಿಧಾನಸಭೆ ಕ್ಷೇತ್ರದಿಂದ 1985ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಶಾಸಕರಾಗಿ ಆಯ್ದೆಯಾಗಿದ್ದರು. ಬಳಿಕ ಮತ್ತೊಮ್ಮೆ ಎರಡನೇ ಬಾರಿಗೂ ಶಾಸಕರಾದ ಅವರು ಬಳಿಕ ಸಹಕಾರಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ತಂದೆಯ ಗರಡಿಯಲ್ಲಿ ಪಳಗಿದ್ದ ಧರ್ಮೇಗೌಡ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿದ್ದರು. ಈ ಕಾರಣದಿಂದಾಗಿ ಧರ್ಮೇಗೌಡ ಹಾಗೂ ಅವರ ಸಹೋದರ ಭೋಜೇಗೌಡ ಅವರ ಕುಟುಂಬ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತೀರಾ ಆಪ್ತರಾಗಿದ್ದರು. ಈ ಅಭಿಮಾನದಿಂದಾಗಿ ಎಚ್‍ಡಿಕೆ ಸಿಎಂ ಆಗಿದ್ದ ಅವಧಿಯಲ್ಲಿ ಸಹೋದರರಿಬ್ಬರನ್ನೂ ಕುಮಾರಸ್ವಾಮಿ ವಿಧಾನ ಪರಿಷತ್ ಸದಸ್ಯರಾಗುವಂತೆ ನೋಡಿಕೊಂಡಿದ್ದರು.
ಕೊಡುಗೈ ದಾನಿ, ಬಡವರ ಪರ ಅಪಾರ ಕಾಳಜಿ ಹೊಂದಿದ್ದ ಧರ್ಮೇಗೌಡ, ರಾಜಕೀಯ, ಸಹಕಾರಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲ ಚುನಾವಣೆಗಳಲ್ಲೂ ಗೆದ್ದು, ಸೋಲಿಲ್ಲದ ಸರದಾರನೆಂದೇ ಜನರಿಂದ ಕರೆಸಿಕೊಳ್ಳುತ್ತಿದ್ದರು. ರಾಜಕೀಯ ತಂತ್ರಗಾರಿಕೆ, ನೇರವಾಗಿ ಮಾತನಾಡುವ ಎದೆಗಾರಿಕೆ ಧರ್ಮೇಗೌಡರದ್ದಾಗಿದ್ದರಿಂದ ಅವರನ್ನು ಎಲ್ಲರೂ ಹಠಮಾರಿ ಎನ್ನುತ್ತಿದ್ದರು. ಆದರೆ ಅವರ ಮನಸ್ಸು ಮಗುವಿನಂತೆ ಇತ್ತು. ಕಷ್ಟ ಹೇಳಿಕೊಂಡು ಬಂದವರಿಗೆ ನೆರವಾಗುತ್ತಿದ್ದರು. ಅವರ ಅಗಲಿಕೆ ಜಿಲ್ಲೆ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ.
- ಎಚ್.ಎಚ್.ದೇವರಾಜ್
ಡಿ.25ರಂದು ನಗರಕ್ಕೆ ಸಿಎಂ ಭೇಟಿ ನೀಡಿದ್ದ ವೇಳೆ ಅವರು ಸಿಎಂ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರುನ್ನು ಸನ್ಮಾನಿಸಿ ಕಡೆಯಲ್ಲಿ ಕೇವಲ 2 ನಿಮಿಷಗಳ ಕಾಲ ಮಾತ್ರ ಭಾಷಣ ಮಾಡಿದ್ದರು. ಈ ಸಮಾರಂಭದ ಬಳಿಕ ಚಿಕ್ಕಮಗಳೂರು ನಗರದಲ್ಲಿ ಸೋಮವಾರ ಬೆಳಗ್ಗೆ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಯುವಜನೋತ್ಸವ ಕಾರ್ಯಕ್ರಮ ಧರ್ಮೇಗೌಡ ಅವರ ಕೊನೆಯ ಕಾರ್ಯಕ್ರಮವಾಯಿತು. ಈ ಸಮಾರಂಭದಲ್ಲಿ ಸಿಟಿ ರವಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದ ಅವರು, ಯುವಜನರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದು ಅವರು ಕೊನೆಯ ಭಾಷಣವಾಗಿ ದಾಖಲಾಯಿತು. ಸೋಮವಾರ ಸಂಜೆ ಅವರು ತಮ್ಮ ಜೀವನಕ್ಕೆ ದುರಂತ ಅಧ್ಯಾಯ ಬರೆದುಕೊಂಡರು.







