ಜೋ ಬೈಡನ್ರ ಡಿಜಿಟಲ್ ತಂಡದಲ್ಲಿ ಭಾರತೀಯ ಮೂಲದ ಆಯಿಶಾ ಶಾಗೆ ಉನ್ನತ ಸ್ಥಾನ

ಫೋಟೊ ಕೃಪೆ; twitter
ವಾಶಿಂಗ್ಟನ್,ಡಿ.29: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ಶ್ವೇತಭವನದ ಡಿಜಿಟಲ್ ಕಾರ್ಯನೀತಿ ಕಚೇರಿಯ ನೂತನ ಸದಸ್ಯರ ಹೆಸರುಗಳನ್ನು ಪ್ರಕಟಿಸಿದ್ದು, ಭಾರತೀಯ ಮೂಲದ ಆಯಿಶಾ ಶಾ ಹಿರಿಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಆಯಿಷಾ ಶಾ ಅವರು ಶ್ವೇತಭವನದ ಡಿಜಿಟಲ್ ಕಾರ್ಯನೀತಿ ಕಚೇರಿಯ ಪಾಲುದಾರಿಕೆಗಳ ಮ್ಯಾನೇಜರ್ ಆಗಿ ನೇಮಿಸಲಾಗಿದೆ. ರೊಬ್ ಫ್ಲಾಹೆರ್ಟಿ ಅವರು ಕಚೇರಿಯ ಮುಖ್ಯಸ್ಥರಾಗಿರುವರು ಎಂದು ಬೈಡನ್ ಅವರ ಅಧಿಕಾರ ಪರಿವರ್ತನಾ ತಂಡದ ಹೇಳಿಕೆಯು ತಿಳಿಸಿದೆ.
ಲೂಸಿಯಾನ ರಾಜ್ಯದಲ್ಲಿ ಬೆಳೆದಿರುವ ಐಶಾ ಅವರು ಮೂಲತಃ ಜಮ್ಮುಕಾಶ್ಮೀರದವರು. ಅವರು ಈ ಮೊದಲು ಬೈಡನ್-ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರದಲ್ಲಿ ಡಿಜಿಟಲ್ ಪಾರ್ಟನರ್ಶಿಪ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು.
ಶಾ ಅವರು ಜಾನ್ ಎಫ್.ಕೆನಡಿ ಪ್ರದರ್ಶನ ಕಲೆಗಳ ಕೇಂದ್ರ ಕಾರ್ಪೊರೇಟ್ ನಿಧಿಯ ಸಹಾಯಕ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ್ದರು.
Next Story





