ಧರ್ಮೇಗೌಡ ಸಾವಿನ ಬಗ್ಗೆ ರೈಲ್ವೆ ಪೊಲೀಸರಿಂದ ತನಿಖೆ: ಚಿಕ್ಕಮಗಳೂರು ಎಸ್ಪಿ ಅಕ್ಷಯ್

ಎಸ್ಪಿ ಅಕ್ಷಯ್ ಮಚ್ಚೀಂದ್ರ
ಚಿಕ್ಕಮಗಳೂರು, ಡಿ.29: ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರ ಮೃತದೇಹ ಸೋಮವಾರ ರಾತ್ರಿ ರೈಲ್ವೆ ಹಳಿಯೊಂದರ ಬಳಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಡೆತ್ನೋಟ್ ಕೂಡ ಸಿಕ್ಕಿದೆ. ಆದರೂ ಅವರ ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗಿದ್ದು, ಈ ಸಂಬಂಧ ರೈಲ್ವೆ ಪೊಲೀಸರು ತನಿಖೆ ನಡೆಸಲಿದ್ದಾರೆಂದು ಎಸ್ಪಿ ಅಕ್ಷಯ್ ಮಚ್ಚೀಂದ್ರ ತಿಳಿಸಿದ್ದಾರೆ.
ಧರ್ಮೇಗೌಡ ಸಾವಿನ ಸಂಬಂಧ ಅನುಮಾನಗಳು ವ್ಯಕ್ತವಾಗಿದ್ದು, ಈ ಸಂಬಂಧ ಅರಸೀಕೆರೆ ರೈಲ್ವೆ ಪೊಲೀಸ್ ವೃತ್ತ ನಿರೀಕ್ಷಕ ಸೂರಜ್ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ಅರಸೀಕೆರೆ ರೈಲ್ವೆ ಪೊಲೀಸ್ ವೃತ್ತದ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ರೈಲ್ವೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನನಗೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದಿರುವುದು ರೈಲ್ವೆ ಪೊಲೀಸ್ ವ್ಯಾಪ್ತಿಯಲ್ಲಿ, ಆದ್ದರಿಂದ ಈ ಪ್ರಕರಣದ ತನಿಖೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಎಸ್ಪಿ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.





