ರೂಪಾಂತರಿತ ವೈರಸ್ ಜರ್ಮನಿಯಲ್ಲಿ ನವೆಂಬರ್‌ನಲ್ಲಿ ಅಸ್ತಿತ್ವದಲ್ಲಿತ್ತು: ವೈದ್ಯಕೀಯ ತಜ್ಞರಿಂದ ಬಹಿರಂಗ

ಬರ್ಲಿನ್,ಡಿ.29:ಬ್ರಿಟನ್‌ನಲ್ಲಿ ಅಲ್ಲೋಲಕಲ್ಲೋಲವೆಬ್ಬಿಸಿರುವ ರೂಪಾಂತರಿತ ಕೊರೋನ ವೈರಸ್, ಜರ್ಮನಿ ದೇಶದಲ್ಲಿ ಕಳೆದ ನವೆಂಬರ್‌ನಲ್ಲಿಯೇ ಅಸ್ತಿತ್ವದಲ್ಲಿತ್ತೆಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಉತ್ತರ ಜರ್ಮನಿಯಲ್ಲಿ ಮೃತಪಟ್ಟಿದ್ದ ಕೊರೋನ ಸೋಂಕಿತರೊಬ್ಬರಲ್ಲಿ ರೂಪಾಂತರಿ ಕೊರೋನ ವೈರಸ್ ಅನ್ನು ಪತ್ತೆ ಹಚ್ಚಿದ ಬಳಿಕ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಈ ವರ್ಷದ ನವೆಂಬರ್‌ನಲ್ಲಿ ಸೋಂಕು ತಗಲಿದ್ದ ವ್ಯಕ್ತಿಯಲ್ಲಿ ಬಿ1.1.7 ತಳಿಯ ವೈರಸ್ ಇದ್ದುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ ಎಂದು ಲೋವರ್ ಸ್ಯಾಕ್ಸೊನಿ ರಾಜ್ಯದ ಆರೋಗ್ಯ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಇದೇ ಪ್ರಭೇದದ ವೈರಸ್ ದಕ್ಷಿಣ ಇಂಗ್ಲೆಂಡ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಲು ಕಾರಣವಾಗಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಬ್ರಿಟನ್ ಪ್ರವಾಸದಿಂದ ವಾಪಸಾಗಿದ್ದ ತಮ್ಮ ಪುತ್ರಿಯ ಮೂಲಕ ಜರ್ಮನಿಯ ದಂಪತಿ ಕಳೆದ ನವೆಂಬರ್‌ನಲ್ಲಿ ಸೋಂಕು ಪೀಡಿತರಾಗಿದ್ದರು. ಆಕೆ ರೂಪಾಂತರಿ ಕೊರೋನ ವೈರಸ್‌ನಿಂದ ಸೋಂಕಿತಳಾಗಿರುವ ಎಲ್ಲಾ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.
ಹ್ಯಾನೊವರ್ ಮೆಡಿಕಲ್ ಸ್ಕೂಲ್‌ನ ತಂಡಗಳು ಡಿಎನ್‌ಎ ತಂತ್ರಜ್ಞಾನದ ಮೂಲಕ ರೂಪಾಂತರಿ ವೈರಸ್‌ನ್ನು ಪತ್ತೆ ಹಚ್ಚಲು ಶಕ್ತವಾಗಿವೆ. ಈ ಪರೀಕ್ಷೆಯ ಫಲಿತಾಂಶವನ್ನು ಬರ್ಲಿನ್ ಚಾರ್ಲಿಟ್ ಆಸ್ಪತ್ರೆಯ ತಂಡವು ದೃಢಪಡಿಸಿದೆ.







