ವಜ್ರ ಹವಾನಿಯಂತ್ರಿತ ಸಾರಿಗೆ ಬಸ್: ಜ.1ರಿಂದ ಪ್ರಯಾಣ ದರದಲ್ಲಿ ಶೇ.20ರಷ್ಟು ಕಡಿತ
ಬೆಂಗಳೂರು, ಡಿ.29: ವಜ್ರ ಹವಾನಿಯಂತ್ರಿತ ಸಾರಿಗೆಗಳ ಪ್ರಯಾಣ ದರ, ದಿನದ ಪಾಸ್ ಮತ್ತು ಮಾಸಿಕ ಪಾಸ್ ದರಗಳನ್ನು ಜ.1ರಿಂದ ಶೇ.20ರಷ್ಟು ಕಡಿತಗೊಳಿಸಿ ಪರಿಷ್ಕರಿಸಲಾಗಿದೆ.
ಬೆಂಗಳೂರು ನಗರದ ಪ್ರಯಾಣಿಕರು ಸಾರ್ವಜನಿಕ ಸಾರಿಗೆಗಳನ್ನು ಉಪಯೋಗಿಸಿ, ಸಾರ್ವಜನಿಕ ಸಮೂಹ ಸಾರಿಗೆಗಳನ್ನು ಉತ್ತೇಜಿಸಲು ಮತ್ತು ವಜ್ರ ಸಾರಿಗೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಜ್ರ ಹವಾನಿಯಂತ್ರಿತ ಸಾರಿಗೆಗಳ ಪ್ರಯಾಣ ದರ, ದಿನದ ಪಾಸು ಮತ್ತು ಮಾಸಿಕ ಪಾಸ್‍ಗಳ ದರಗಳನ್ನು ಕಡಿಮೆಗೊಳಿಸಿ ಪರಿಷ್ಕರಿಸಲಾಗಿದೆ.
ವಜ್ರ ಮಾಸಿಕ ಪಾಸು: ವಜ್ರ ಹವಾನಿಯಂತ್ರಿತ ಸಾರಿಗೆ ಬಸ್‍ಗಳ ಮಾಸಿಕ ದರವು ಪ್ರಸ್ತುತ 2,363 ರೂ.ಇದೆ. ಇದರಲ್ಲಿ ಶೇ.20ರಷ್ಟು ಕಡಿತಗೊಳಿಸಿ ಜ.1ರಿಂದ ಎರಡು ಸಾವಿರ ರೂ.ಆಗಿದೆ. ಹಾಗೆಯೇ ವಜ್ರ ದಿನದ ಪಾಸು ಪ್ರಸ್ತುತ 147 ರೂ.ಇದೆ. ಜ.1ರಿಂದ 120 ರೂ.ಆಗಲಿದೆ.
ಹೊಸ ವಜ್ರ ಸಾರಿಗೆ ಸೇವೆಗಳು: ಸಾರ್ವಜನಿಕ ಪ್ರಯಾಣಿಕರಿಗೆ ಇನ್ನೂ ಉತ್ತಮ ಗುಣಮಟ್ಟದ ವ್ಯವಸ್ಥಿತ ಸಾರಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ, ಜ.4ರಿಂದ ಹೊಸದಾಗಿ 12 ಮಾರ್ಗಗಳಲ್ಲಿ 81 ಹವಾನಿಯಂತ್ರಿತ ವಜ್ರ ಸಾರಿಗೆಗಳನ್ನು ಪರಿಚಯಿಸಿ ಕಾರ್ಯಾಚರಣೆಗೊಳಿಸಲಾಗುತ್ತಿದೆ.
ವಿಶೇಷ ಸೂಚನೆ: ಸಾಮಾನ್ಯ ಸೇವೆಗಳ ಮಾಸಿಕ(1050 ರೂ.) ಪಾಸುದಾರರು ಹಾಗೂ ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ (945 ರೂ.) ಪಾಸುದಾರರು ಚಾಲ್ತಿಯಲ್ಲಿರುವ ಪಾಸನ್ನು ತೋರಿಸಿ, ರವಿವಾರಗಳಂದು ವಜ್ರ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







