ಗೋ ಹತ್ಯೆ ನಿಷೇಧ ಕಾನೂನಿನ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಮಂಗಳೂರು, ಡಿ. 29: ಕೃಷಿಕರು, ದಲಿತರು, ಅಲ್ಪಸಂಖ್ಯಾತ ಮತ್ತು ಸಂವಿಧಾನ ವಿರೋಧಿ ಗೋಹತ್ಯೆ ನಿಷೇಧ ಕಾನೂನಿಗೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಆಗ್ರಹಿಸಿ ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಮಂಗಳವಾರ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾರ್ಪೊರೇಟರ್ ಮುನೀಬ್ ಬೆಂಗರೆ ಸಂಘಪರಿವಾರದ ಅನತಿಯಂತೆ ಆಡಳಿತ ನಡೆಸುತ್ತಿ ರುವ ಬಿಜೆಪಿ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಸೂಕ್ಷ್ಮ ವಿಚಾರವನ್ನು ಮುಂದಿಟ್ಟು ರಾಜಕಾರಣ ಮಾಡುತ್ತಿದೆ. ಇದೀಗ ಆಹಾರದ ಹಕ್ಕಿನ ಮೇಲೆ ದಾಳಿ ನಡೆಸುತ್ತಿದೆ. ಇದರಿಂದ ಮುಸ್ಲಿಮರಿಗೆ ಮಾತ್ರವಲ್ಲ, ದಲಿತರು ಮತ್ತು ಕೃಷಿಕರಿಗೂ ಅನ್ಯಾಯವಾಗಲಿದೆ. ಹಾಗಾಗಿ ರಾಜ್ಯಪಾಲರು ಈ ಕಾನೂನಿಗೆ ಅಂಕಿತ ಹಾಕಬಾರದು. ಒಂದು ವೇಳೆ ಅಂಕಿತ ಹಾಕಿದರೆ ‘ರಾಜಭವನ ಚಲೋ’ ಮಾಡಲಾಗುವುದು ಎಂದು ಎಚ್ಚರಿಸಿದರು.
ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಗೋಹತ್ಯೆ ನಿಷೇಧ ಕಾಯ್ದೆ ಮಾಡುವ ಬಿಜೆಪಿಯು ವಿದೇಶಕ್ಕೆ ಯಥೇಚ್ಛವಾಗಿ ಗೋಮಾಂಸ ವನ್ನು ರಫ್ತು ಮಾಡುವುದರ ವಿರುದ್ಧ ಯಾವುದೇ ಕಡಿವಾಣ ಹಾಕುವುದಿಲ್ಲ. ಬಿಜೆಪಿ ಎಸಗುವ ಈ ಅನ್ಯಾಯ, ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ ದಮನಿಸುತ್ತಿರುವುದು ವಿಪರ್ಯಾಸ ಎಂದು ಮುನೀಬ್ ಬೆಂಗರೆ ಹೇಳಿದರು.
ಎಸ್‌ಡಿಪಿಐ ನಾಯಕರಾದ ಅಬೂಬಕರ್ ಸಿದ್ದೀಕ್, ಶರೀಫ್ ಪಾಂಡೇಶ್ವರ, ಅಕ್ಬರ್ ಕುದ್ರೋಳಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.






.jpeg)


