ಬೆಂಗಳೂರು ವಿವಿ ಶಿಕ್ಷಕೇತರ ಸಿಬ್ಬಂದಿ ಧರಣಿ 15ನೇ ದಿನಕ್ಕೆ
ಸಮಸ್ಯೆ ಬಗೆಹರಿಯುವವರೆಗೂ ಕೆಲಸಕ್ಕೆ ಬಹಿಷ್ಕಾರ: ಕೃಷ್ಣಪ್ಪ
ಬೆಂಗಳೂರು, ಡಿ.29: ಮುಂಭಡ್ತಿ ಹಾಗೂ ವಿಶ್ವವಿದ್ಯಾಲಯದಲ್ಲಿ ಹೆಚ್ಚುತ್ತಿರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ಸಿಬ್ಬಂದಿ ನಡೆಸುತ್ತಿರುವ ಧರಣಿ 15ನೇ ದಿನಕ್ಕೆ ಕಾಲಿಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವವರೆಗೂ ಕೆಲಸಗಳನ್ನು ಬಹಿಷ್ಕರಿಸಲಾಗುವುದೆಂದು ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ಸಂಘದ ಕಾರ್ಯದರ್ಶಿ ಎಚ್.ಕೃಷ್ಣಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶ್ವವಿದ್ಯಾಲಯದ ಹಲವು ಶಿಕ್ಷಕೇತರ ಸಿಬ್ಬಂದಿಗಳು ಮುಂಭಡ್ತಿಗೆ ಅರ್ಹರಿದ್ದಾರೆ. ಇದಕ್ಕಾಗಿ 5-6 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವೇ ಇಲ್ಲದ ರೀತಿಯಲ್ಲಿ ನಿರ್ಲಕ್ಷ್ಯ ವಹಿಸುತ್ತಾ ಬರುತ್ತಿದ್ದಾರೆಂದು ಆರೋಪಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶಿಕ್ಷಕೇತರರ ಸಿಬ್ಬಂದಿಗಳ ಮೇಲೆ ಕಿರುಕುಳ ಹೆಚ್ಚಾಗಿದೆ. ಏಕ ವಚನದಲ್ಲಿ ಮಾತನಾಡಿಸುವುದು, ಉದಾಸೀನ ವರ್ತನೆ ತೋರುವುದು ಸೇರಿದಂತೆ ಮಾನಸಿಕ ಹಿಂಸೆ ನೀಡಲಾಗುತ್ತದೆ. ಹೀಗಾಗಿ ನಮಗೂ, ನಮ್ಮ ಕೆಲಸಕ್ಕೂ ಗೌರವ ನೀಡಬೇಕೆಂದು ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಇಲ್ಲಿಯವರೆಗೂ ಯಾವ ಬದಲಾವಣೆಯೂ ಆಗಿಲ್ಲವೆಂದು ಅವರು ಹೇಳಿದ್ದಾರೆ.
ಇವೆಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಳೆದ 15ದಿನಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಆದರೆ, ನಮ್ಮ ಹೋರಾಟ ಹಾಗೂ ಬೇಡಿಕೆಗಳ ಬಗ್ಗೆ ಕನಿಷ್ಟ ಸೌಜನ್ಯಕ್ಕಾದರು ಕುಲಸಚಿವರು ಭೇಟಿ ನೀಡಿ, ನಮ್ಮೊಂದಿಗೆ ಚರ್ಚೆ ನಡೆಸಿಲ್ಲ. ಹೀಗಾಗಿ ನಾಳೆ(ಡಿ.30)ಯಿಂದ ವಿಶ್ವವಿದ್ಯಾಲಯದ ಎಲ್ಲ ಶಿಕ್ಷಕೇತರರು ಕೆಲಸಗಳನ್ನು ಬಹಿಷ್ಕರಿಸಿ ಹೋರಾಟವನ್ನು ಮುಂದುವರೆಸಲಿದ್ದೇವೆಂದು ಅವರು ಎಚ್ಚರಿಕೆ ನೀಡಿದ್ದಾರೆ.







