ಒಹಿಯೋ: ಕಪ್ಪು ಜನಾಂಗೀಯನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸ್ ಅಧಿಕಾರಿಯ ವಜಾ
ವಾಶಿಂಗ್ಟನ್,ಡಿ.25: ಕಳೆದ ವಾರ ಅಮೆರಿಕದ ಒಹಿಯೋ ರಾಜ್ಯದಲ್ಲಿ ಕಪ್ಪು ಜನಾಂಗೀಯನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸ್ ಅಧಿಕಾರಿಯನ್ನು ಸೋಮವಾರ ಸೇವೆಯಿಂದ ವಜಾಗೊಳಿಸಲಾಗಿದೆಯೆಂದು ನಗರಾಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ಕಪ್ಪುವರ್ಣೀಯ ಆ್ಯಂಡ್ರೆ ವೌರಿಸ್ ಹಿಲ್‌ನ ಹತ್ಯೆ ವಿರುದ್ಧ ಅಮೆರಿಕದಲ್ಲಿ ಭಾರೀ ಜನಾಕ್ರೋಶ ವ್ಯಕ್ತವಾಗಿದ್ದು, ಪೊಲೀಸರ ದೌರ್ಜನ್ಯ ಹಾಗೂ ವ್ಯವಸ್ಥಿತವಾದ ಜನಾಂಗೀಯವಾದವನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ.
ಸಣ್ಣ ಪುಟ್ಟ ಘಟನೆಯೊಂದಕ್ಕೆ ಸಂಬಂಧಿಸಿ ಸ್ಥಳಕ್ಕೆ ಧಾವಿಸಿದ್ದ ಪೊಲೀಸ್ ಅಧಿಕಾರಿ ಆ್ಯಡಂ ಕೋಯ್, ಮನೆಯೊಂದರ ಗ್ಯಾರೇಜ್‌ನಲ್ಲಿ 47 ವರ್ಷದ ಕಪ್ಪುವರ್ಣೀಯ ಅಮೆರಿಕನ್ ಪ್ರಜೆ ಆ್ಯಂಡ್ರೆ ಹಿಲ್ ಮೌರಿಸ್ ಅವರನ್ನು ಹಲವಾರು ಬಾರಿ ಗುಂಡಿಕ್ಕಿ ಕೊಂದನೆಂದು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಆ್ಯಡಂ ಕಾಯ್ ಗುಂಡುಹಾರಿಸಿದ ಸಂದರ್ಭ ಹಿಲ್ ಶಸ್ತ್ರಸಜ್ಜಿತನಾಗಿರಲಿಲ್ಲವೆಂದು ತಿಳಿದುಬಂದಿದೆ. ಕೊಲಂಬಸ್ ನಗರದಲ್ಲಿ ಕೇವಲ ಮೂರು ವಾರಗಳಿಗೂ ಕಡಿಮೆ ಅವಧಿಯಲ್ಲಿ ಪೊಲೀಸರಿಂದ ಕಪ್ಪುಜನಾಂಗೀಯ ವ್ಯಕ್ತಿಯ ಹತ್ಯೆ ನಡೆದಿರುವುದು ಇದು ಎರಡನೆ ಸಲವಾಗಿದೆ.
‘‘ಕಪ್ಪುವರ್ಣೀಯರನ್ನು ಕ್ರಿಮಿನಲ್‌ಗಳು ಅಥವಾ ಆಪಾಯಕಾರಿಗಳು ಎಂದು ಭಾವಿಸುವ ಪೊಲೀಸರ ಪ್ರವೃತ್ತಿಗೆ ಆ್ಯಂಡ್ರೆ ಹಿಲ್ ಅವರ ಸಾವು ಇನ್ನೊಂದು ದುರಂತಮಯ ಉದಾಹರಣೆಯಾಗಿದೆ. ಸಮಗ್ರ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್ ವ್ಯವಸ್ಥೆಯ ಸಮಗ್ರ ಸುಧಾರಣೆಯ ಅಗತ್ಯವನ್ನು ಈ ಘಟನೆಯು ಬೆಟ್ಟು ಮಾಡಿ ತೋರಿಸುತ್ತದೆ’’ ಎಂದು ನ್ಯಾಯವಾದಿ ಬೆನ್ ಕ್ರಂಪ್ ತಿಳಿಸಿದ್ದಾರೆ. ಬೆನ್ ಕ್ರಂಪ್ ಅವರು ಕಳೆದ ಮೇನಲ್ಲಿ ಅಮೆರಿಕದ್ಯಾಂತ ಜನಾಂಗೀಯ ವಿರೋಧಿ ಪ್ರತಿಭಟನೆಯನ್ನು ಭುಗಿಲೆಬ್ಬಿಸಿದ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣ ಸೇರಿದಂತೆ ಪೊಲೀಸ್ ದೌರ್ಜನ್ಯದಿಂದ ಸಾವಿಗೀಡಾದವರ ಹಲವಾರು ಕುಟುಂಬಗಳ ಪರವಾಗಿ ವಾದಿಸಿದ್ದಾರೆ.







