17 ಜೆಡಿಯು ಶಾಸಕರು ಆರ್ ಜೆಡಿ ಸಂಪರ್ಕದಲ್ಲಿದ್ದಾರೆ: ಶ್ಯಾಮ್ ರಜಕ್

ಪಾಟ್ನಾ: ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳದ(ಜೆಡಿಯು)17 ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಅವರು ಶೀಘ್ರವೇ ಆರ್ ಜೆಡಿ ಸೇರಲಿದ್ದಾರೆ ಎಂದು ರಾಷ್ಟ್ರೀಯ ಜನತಾದಳದ ನಾಯಕ ಶ್ಯಾಮ್ ರಜಕ್ ಹೇಳಿದ್ದಾರೆ.
"17 ಜೆಡಿಯು ಶಾಸಕರು ನನ್ನ ಮೂಲಕ ಆರ್ ಜೆಡಿ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಹತಾಶರಾಗಿದ್ದು ಆದಷ್ಟು ಬೇಗನೆ ಆರ್ ಜೆಡಿಗೆ ಸೇರಲು ಉತ್ಸುಕರಾಗಿದ್ದಾರೆ. ಪಕ್ಷಾಂತರ ಕಾಯ್ದೆ ಅನ್ವಯ ಅವರು ಸದಸ್ಯತ್ವ ಕಳೆದುಕೊಳ್ಳುವ ಅಪಾಯವಿರುವ ಕಾರಣ ನಾವು ಅವರನ್ನು ತಡೆದಿದ್ದೇವೆ. ಇತ್ತೀಚೆಗೆ ಮತ್ತೊಮ್ಮೆ ಅಧಿಕಾರಕ್ಕೇರಿರುವ ನಿತೀಶ್ ಕುಮಾರ್ ಸರಕಾರದಲ್ಲಿ ಬಿಜೆಪಿಯ ನಡವಳಿಕೆಯ ಬಗ್ಗೆ ಜೆಡಿಯು ಶಾಸಕರು ಅಸಮಾಧಾನಗೊಂಡಿದ್ದಾರೆ''ಎಂದು ರಜಕ್ ಹೇಳಿದ್ದಾರೆ.
ಒಂದು ವೇಳೆ ಜೆಡಿಯುನ 25ರಿಂದ 26 ಶಾಸಕರು ಪಕ್ಷಾಂತರವಾದರೆ ಇವರ ಸದಸ್ಯತ್ವ ರದ್ದಾಗುವುದಿಲ್ಲ. ಈ ಸಂದರ್ಭದಲ್ಲಿ ಪಕ್ಷಾಂತರ ಕಾನೂನು ಅನ್ವಯವಾಗುವುದಿಲ್ಲ. ಶೀಘ್ರವೇ ಇದು ನಡೆಯಲಿದೆ ಎಂದು ರಜಕ್ ಹೇಳಿದ್ದಾರೆ.
"ರಜಕ್ ಅವರ ಹೇಳಿಕೆ ಜನರನ್ನು ದಾರಿ ತಪ್ಪಿಸುವ ಯತ್ನವಾಗಿದೆ. ಜೆಡಿಯು ಶಾಸಕರೆಲ್ಲರೂ ಒಗ್ಗಟ್ಟಿನಿಂದಿದ್ದಾರೆ. ನಮ್ಮ ಪಕ್ಷದಲ್ಲಿ ಅಸಮಾಧಾನವಿಲ್ಲ. ಅರುಣಾಚಲ ಪ್ರದೇಶದಲ್ಲಿ ಜೆಡಿಯು ಶಾಸಕರು ಬಿಜೆಪಿಗೆ ಪಕ್ಷಾಂತರವಾಗಿದ್ದಕ್ಕೆ ನಮ್ಮ ಪಕ್ಷಕ್ಕೆ ಬೇಸರವಾಗಿದೆ. ಈ ಕಾರಣಕ್ಕೆ ನಮ್ಮ ಶಾಸಕರು ಪಕ್ಷ ತ್ಯಜಿಸುತ್ತಾರೆ ಎನ್ನುವುದು ಸರಿಯಲ್ಲ. ಆರ್ ಜೆಡಿ ತನ್ನ ಶಾಸಕರನ್ನು ಒಟ್ಟಿಗೆ ಇಟ್ಟುಕೊಳ್ಳಲಿ. ತೇಜಸ್ವಿಯಾದವ್ ಕಾರ್ಯಶೈಲಿಗೆ ಹೆಚ್ಚಿನ ಶಾಸಕರು ಅಸಮಾಧಾನಗೊಂಡಿದ್ದಾರೆ'' ಎಂದು ಜೆಡಿಯು ವಕ್ತಾರ ರಾಜೀವ್ ರಂಜನ್ ಹೇಳಿದ್ದಾರೆ.







