ಗ್ರಾ.ಪಂ. ಚುನಾವಣೆ ಮತ ಎಣಿಕೆ: 5,342 ಸೀಟುಗಳಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು

ಬೆಂಗಳೂರು, ಡಿ.30: ರಾಜ್ಯದಲ್ಲಿ ಡಿ.22 ಮತ್ತು 27 ರಂದು ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ ಆರಂಭವಾಗಿದ್ದು, 5,342 ಕಡೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮತ್ತು 3,155 ಕಡೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ ಎಂದು timesofindia.com ವರದಿ ಮಾಡಿದೆ.
ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 1,582 ಕಡೆಗಳಲ್ಲಿ ಮುನ್ನಡೆಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರತಿ ಮತ ಎಣಿಕೆ ಕೇಂದ್ರದಲ್ಲೂ ಮತ ಎಣಿಕೆಗಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯತ್ ನ ಮತ ಎಣಿಕೆಗೆ ಟೇಬಲ್‍ಗಳನ್ನು ನಿಗದಿಪಡಿಸಲಾಗಿದೆ. ಕೊರೋನ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದಲ್ಲೂ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಮತ ಎಣಿಕೆ ಕೇಂದ್ರದ ಬಳಿ ಜನ ಗುಂಪುಗೂಡದಂತೆ, ಎಚ್ಚರಿಕೆ ವಹಿಸಲಾಗಿದೆ. ಗೆದ್ದ ಅಭ್ಯರ್ಥಿಯ ವಿಜಯೋತ್ಸವ ಆಚರಣೆಗೂ ನಿರ್ಬಂಧ ಹೇರಲಾಗಿದೆ.
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಶೇ. 82.04 ರಷ್ಟು ಹಾಗೂ ಎರಡನೇ ಹಂತದ ಚುನಾವಣೆಯಲ್ಲಿ ಶೇ. 80.71 ರಷ್ಟು ಮತದಾನ ಆಗಿದೆ.





