ನಮಗೆ ಮಾಸಾಶನ ನೀಡಿದ ಮಮತಾರನ್ನು ನಾವೇಕೆ ಬೆಂಬಲಿಸಬಾರದು: ಅಮಿತ್ ಶಾಗೆ ಊಟ ಬಡಿಸಿದ್ದ ಜನಪದ ಗಾಯಕ ಬಸುದೇಬ್ ದಾಸ್
“ಊಟ ಮಾಡಿದ ಮೇಲೆ ಗೃಹ ಸಚಿವರು ಮಾತನಾಡದೆ ಹೋದರು”

ಕೋಲ್ಕತ್ತಾ : ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂಗಾಳಿ ಜನಪದ ಗಾಯಕ ಬಸುದೇಬ್ ದಾಸ್ ಅವರ ನಿವಾಸದಲ್ಲಿ ಊಟ ಮಾಡಿದ್ದರೆ ಮಂಗಳವಾರ ದಾಸ್ ಅವರು ಬೋಲ್ಪುರ್‍ನಲ್ಲಿ ನಡೆದ ತೃಣಮೂಲ ಕಾಂಗ್ರೆಸ್ ರ್ಯಾಲಿಯಲ್ಲಿ ಭಾಗವಹಿಸಿದರಲ್ಲದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ವೇದಿಕೆಯನ್ನೂ ಹಂಚಿಕೊಂಡಿದ್ದಾರೆ.
ಅಮಿತ್ ಶಾ ಅವರು ತಮ್ಮ ಮನೆಗೆ ಭೇಟಿ ನೀಡಿ ಹೋದ ನಂತರ ಪ್ರತಿಕ್ರಿಯಿಸಿದ್ದ ದಾಸ್, ಸಚಿವರು ಊಟದ ನಂತರ ತಮ್ಮ ಜತೆ ಮಾತನಾಡಿಲ್ಲ ಎಂದೂ ಹೇಳಿ ತಮ್ಮ ಅಸಮಾಧಾನ ತೋಡಿಕೊಂಡಿದ್ದರು.
ಮಂಗಳವಾರ ಮಮತಾ ಬ್ಯಾನರ್ಜಿ ಅವರು ದಾಸ್ ಅವರನ್ನು ವೇದಿಕೆಗೆ ಆಹ್ವಾನಿಸಿ ಅವರಿಗೆ ತಮ್ಮ ಶಾಲ್ ಹೊದೆಸಿ ಸನ್ಮಾನಿಸಿದರು. ನಂತರ ಹಾಡುವ ಮೂಲಕ ನೆರೆದಿದ್ದ ಸಭಿಕರನ್ನು ಆಶೀರ್ವದಿಸುವಂತೆ ಅವರು ಕೇಳಿಕೊಂಡರು. ಇದಕ್ಕೆ ಒಪ್ಪಿ ತಮ್ಮ ಖ್ಯಾತ ಹಾಡು `ತೊಮಯ್ ಹೃದೊಯ್ ಮಝಾರೆ ರಖ್ಬೊ, ಜೇತೆ ದೆಬೊ ನಾ'' ಹಾಡಿದರು. ಶಾ ಎದುರೂ ದಾಸ್ ಇದೇ ಹಾಡು ಹಾಡಿದ್ದರು.
ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಗಾಯಕ , “ಮಮತಾ ಬ್ಯಾನರ್ಜಿ ನಮಗೆ ಐಡೆಂಟಿಟಿ ಕಾರ್ಡ್ ನೀಡಿದ್ದಾರೆ. 1000 ರೂ. ಮಾಸಾಶನ ಸಿಗುವಂತೆ ಮಾಡಿದ್ದಾರೆ. ಹಾಗಾಗಿ ನಾವೇಕೆ ಮಮತಾ ಬ್ಯಾನರ್ಜಿ ಜೊತೆ ನಿಲ್ಲಬಾರದು. ನಾವು ಕಲಾವಿದರು, ನಮಗೆ ರಾಜಕೀಯ ಅರ್ಥವಾಗುವುದಿಲ್ಲ. ನಾವು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ದೊಡ್ಡ ನಾಯಕರುಗಳಾದ ಮಮತಾ ದೀದಿ ಅಥವಾ ಅಮಿತ್ ಶಾ ನಮ್ಮನ್ನು ಆಹ್ವಾನಿಸಿದಾಗ ನಾವು ಅವರ ಕಾರ್ಯಕ್ರಮಗಳಿಗೆ ಹಾಜರಾಗಲು ಯತ್ನಿಸುತ್ತೇವೆ,'' ಎಂದರು.
``ಅಮಿತ್ ಶಾ ಅವರಿಗೆ ಊಟದ ಏರ್ಪಾಟು ಮಾಡುವಂತೆ ಬಿಜೆಪಿ ಹೇಳಿದಾಗ ನಾನು ಒಪ್ಪಿದೆ. ಎಲ್ಲಾ ಸಾಮಗ್ರಿ ಖರೀದಿಸಿದೆ. ಅವರು (ಬಿಜೆಪಿ ನಾಯಕರು) ಕೇವಲ ಸಿಹಿತಿಂಡಿ ತಂದಿದ್ದರು,'' ಎಂದರು.
ತಾವು ಮಮತಾ ಅವರ ರ್ಯಾಲಿಯಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದಾಗಿ ಹಾಗೂ ತೃಣಮೂಲದಿಂದ ಯಾವುದೇ ಒತ್ತಡವಿರಲಿಲ್ಲ ಎಂದು ಅವರು ಹೇಳಿದರು.
ನಿಮ್ಮ ಹೃದಯದಲ್ಲಿ ಯಾರಿದ್ದಾರೆ- ಮಮತಾ ಬ್ಯಾನರ್ಜಿ ಅಥವಾ ಅಮಿತ್ ಶಾ ಎಂಬ ಪ್ರಶ್ನೆಗೆ ಉತ್ತರಿಸಿದ ಗಾಯಕ ``ಇಬ್ಬರೂ ಉನ್ನತ ವ್ಯಕ್ತಿಗಳು ನನ್ನ ಹೃದಯದಲ್ಲಿ ನೆಲೆಸಿದ್ದಾರೆ,'' ಎಂದರು.







