ಕಾಲುವೆಗೆ ಉರುಳಿಬಿದ್ದ ಕಾರು: ಮತ ಏಣಿಕೆ ಏಜೆಂಟ್ ಮೃತ್ಯು

ಹಾವೇರಿ, ಡಿ.30: ಕಾರೊಂದು ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿಬಿದ್ದ ಪರಿಣಾಮ ಅಭ್ಯರ್ಥಿಯ ಪರ ಮತ ಎಣಿಕೆ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಈ ಘಟನೆ ನಡೆದಿದ್ದು, ಬಸವನಹಟ್ಟಿ ಗ್ರಾಮದ ಪ್ರಕಾಶ್ ಬನ್ನಿಮಟ್ಟಿ(40) ಹಾಗೂ ಸಿದ್ದನಗೌಡ ಬಿಸ್ಟನಗೌಡರ(45) ಎಂದು ಗುರುತಿಸಲಾಗಿದೆ.
ಈ ಇಬ್ಬರು ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಗ್ರಾಮ ಪಂಚಾಯತ್ ಮತ ಎಣಿಕೆ ಹಿನ್ನೆಲೆಯಲ್ಲಿ ಹಾವೇರಿಗೆ ಇಬ್ಬರು ಬರುತ್ತಿದ್ದರು. ಅಭ್ಯರ್ಥಿಯ ಪರವಾಗಿ ಮತ ಎಣಿಕೆಯಲ್ಲಿ ಏಜೆಂಟ್ ಆಗಿ ಪ್ರಕಾಶ್ ಹಾವೇರಿಗೆ ಬರುತ್ತಿದ್ದರು. ಕಾರು ಚಾಲಕನ ನಿಯಂತ್ರಣ ತಪ್ಪಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಕಾರು ಉರುಳಿ ಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಿಯರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹ ಮತ್ತು ಕಾರನ್ನು ಮೇಲೆ ಎತ್ತುವ ಕಾರ್ಯ ಮಾಡಿದ್ದಾರೆ. ಈ ಸಂಬಂಧ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.





