ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಮಿಷ, ಬೆದರಿಕೆ ಮೂಲಕ ಸೆಳೆಯುತ್ತಿರುವ ಬಿಜೆಪಿ: ಸಿದ್ದರಾಮಯ್ಯ ಆರೋಪ

ಬೆಂಗಳೂರು, ಡಿ. 30: 'ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಗೆ ಇದು ಸತ್ವ ಪರೀಕ್ಷೆಯ ಕಾಲ. ಮತದಾರರ ವಿಶ್ವಾಸವನ್ನು ಗೆಲ್ಲಲಾಗದ ಬಿಜೆಪಿ ರಾಜ್ಯದ ಹಲವಾರು ಕಡೆಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಸೆ-ಆಮಿಷ ಮತ್ತು ಬೆದರಿಕೆ ಮೂಲಕ ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಇಂತಹ ಕೃತ್ಯಗಳು ಖಂಡನೀಯ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಸಂಭ್ರಮಾಚರಣೆ ಫೋಟೋವೊಂದನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿರುವ ಅವರು, ರಾಜ್ಯದಲ್ಲಿ ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದ ದಿನದಿಂದ ಗ್ರಾಮೀಣ ಪ್ರದೇಶದ ಮತದಾರರು ಎಂದೂ ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟಿಲ್ಲ. ರೈತ ಪರ, ಬಡವರ ಪರ ಮತ್ತು ಗ್ರಾಮಭಾರತದ ಪರವಾಗಿರುವ ಕಾಂಗ್ರೆಸ್ ಪಕ್ಷದ ನೀತಿ ಮತ್ತು ಕಾರ್ಯಕ್ರಮಗಳು ಇದಕ್ಕೆ ಮೂಲ ಕಾರಣ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವಿನ ಪರಂಪರೆ ಈ ಬಾರಿಯೂ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.
'ಭಾರತೀಯ ಜನತಾ ಪಕ್ಷದ ರೈತ ವಿರೋಧಿ ಮತ್ತು ಬಡವರ ವಿರೋಧಿ ನೀತಿಯಿಂದ ರೋಸಿಹೋದ ಗ್ರಾಮೀಣ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಿದ್ದು, ಕೆಪಿಸಿಸಿ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ಹಾದಿಯಲ್ಲಿರುವ ವರದಿಗಳು ಬರುತ್ತಿವೆ ಎಂದು ಸಿದ್ದರಾಮಯ್ಯ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
'ಕೆಪಿಸಿಸಿಗೆ ಇದು ಸತ್ವ ಪರೀಕ್ಷೆಯ ಕಾಲ. ಮತದಾರರ ವಿಶ್ವಾಸವನ್ನು ಗೆಲ್ಲಲಾಗದ ಬಿಜೆಪಿ ಹಲವಾರು ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಸೆ-ಆಮಿಷ ಮತ್ತು ಬೆದರಿಕೆ ಮೂಲಕ ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಇಂತಹ ಕೃತ್ಯಗಳು ಖಂಡನೀಯ'
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ







