ಮಸೀದಿಯೆದುರು ಜೈಶ್ರೀರಾಂ ಘೋಷಣೆ ಬಳಿಕ ತಂಡಗಳ ಮಧ್ಯೆ ಘರ್ಷಣೆ: 24 ಮಂದಿಯ ಬಂಧನ
ಸಂಘಪರಿವಾರ ಗುಂಪುಗಳ ರ‍್ಯಾಲಿ ಸಂದರ್ಭ ನಡೆದ ಘಟನೆ

ಭೋಪಾಲ್, ಡಿ.30: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಧ್ಯಪ್ರದೇಶದ ಚಂದನ್‌ಖೇಡಿ ಗ್ರಾಮದಲ್ಲಿ ಮಂಗಳವಾರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿದ್ದ ಹಿಂದು ಸಂಘಟನೆಯ ಸದಸ್ಯರ ತಂಡವೊಂದು ಮಸೀದಿ ಎದುರು ‘ಜೈ ಶ್ರೀರಾಂ’ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ 24 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಸಂಘಪರಿವಾರ ಸಂಘಟನೆಯ ಸದಸ್ಯರು ರ‍್ಯಾಲಿ ಸಂಘಟಿಸಿದ್ದರು ಹಾಗೂ ರ್ಯಾಲಿ ಮಸೀದಿಯ ಎದುರು ಹಾದು ಹೋಗುತ್ತಿದ್ದಾಗ ಸುಮಾರು 200ರಷ್ಟಿದ್ದ ಗುಂಪು ಹನುಮಾನ ಚಾಲೀಸ ಪಠಿಸುವ ಜೊತೆಗೆ ‘ಜೈ ಶ್ರೀರಾಂ’ ಎಂದು ಘೋಷಣೆ ಮೊಳಗಿಸಿದೆ. ಈ ಸಂದರ್ಭ ಎರಡು ತಂಡಗಳೊಳಗೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆದಿದೆ. ಹಿಂದು ಸಂಘಟನೆಯ ಕೆಲವು ಸದಸ್ಯರು ಮಸೀದಿಯ ಎದುರು ಕೇಸರಿ ಧ್ವಜ ಹಾರಿಸಿದ್ದಲ್ಲದೆ ಮಸೀದಿಯ ಮೇಲೇರಿ ಹಾನಿಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸಂಘಪರಿವಾರ ಸಂಘಟನೆಯ ಸದಸ್ಯರು ಮಸೀದಿಯ ಸುತ್ತಮುತ್ತಲಿನ ಮನೆಗಳಿಗೆ ಹಾಗೂ ಅಲ್ಲಿದ್ದ ವಾಹನಗಳಿಗೆ ಹಾನಿ ಎಸಗಲು ಪ್ರಯತ್ನಿಸಿರುವ ಘಟನೆಯ ವೀಡಿಯೊ ವೈರಲ್ ಆಗಿದೆ. ವೀಡಿಯೊ ಸಾಕ್ಷದ ಆಧಾರದಲ್ಲಿ 24 ಮಂದಿಯನ್ನು ಗುರುತಿಸಿ ವಶಕ್ಕೆ ಪಡೆಯಲಾಗಿದೆ. ಎರಡೂ ತಂಡಗಳ ಇನ್ನಷ್ಟು ಕಾರ್ಯಕರ್ತರನ್ನು ಬಂಧಿಸಬೇಕಾಗಿದೆ. ಜೊತೆಗೆ, ಮಸೀದಿಯ ತುದಿಯನ್ನು ಏರಿದವರನ್ನು ಗುರುತಿಸಿ ಸಂಬಂಧಿಸಿದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗುವುದು ಎಂದು ಇಂದೋರ್ ಪೊಲೀಸ್ ಮಹಾನಿರ್ದೇಶಕ ಯೋಗೇಶ್ ದೇಶ್‌ಮುಖ್ ಹೇಳಿದ್ದಾರೆ. ಸ್ಥಳದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು ಜಿಲ್ಲಾಧಿಕಾರಿ ಮನೀಶ್ ಸಿಂಗ್, ಹಿರಿಯ ಪೊಲೀಸ್ ಅಧೀಕ್ಷಕ ಹರಿನಾರಾಯಣ್ ಚಾರಿ ಮಿಶ್ರಾ ಸಹಿತ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಚಂದನ್ ಖೇಡಿ, ಧರ್ಮತ್, ರುದ್ರಾಖ್ಯ, ಸುನಾಲ, ದೂಧ್‌ಖೇಡಿ , ಗೌತಮ್‌ಪುರ ಮತ್ತು ಸನ್ವೇರ್ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.







