ಮೊಬೈಲ್ ಪೋನ್ ಪ್ರಚಾರಕ್ಕೆ ಆದಿತ್ಯನಾಥ್,ಮೋದಿ ಚಿತ್ರ: ಉ.ಪ್ರದೇಶ ಸಚಿವರ ಸೋದರನ ವಿರುದ್ಧ ಪ್ರಕರಣ

ಲಕ್ನೋ,ಡಿ.30: ಮೊಬೈಲ್ ಫೋನ್ ಬ್ರಾಂಡೊಂದರ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ಬಳಸಿಕೊಂಡಿದ್ದಕ್ಕಾಗಿ ಉತ್ತರ ಪ್ರದೇಶದ ಸಚಿವ ಕಪಿಲದೇವ ಅಗರವಾಲ್ ಅವರ ಸೋದರನ ವಿರುದ್ಧ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ.
ಮಾಧ್ಯಮ ವರದಿಗಳಂತೆ ಡಿ.26ರಂದು ಲಕ್ನೋದ ಹಝರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಆರೋಪಿ ಲಲಿತ್ ಅಗರವಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಜಾಹೀರಾತು ಸಂಸ್ಥೆಯೊಂದನ್ನು ನಡೆಸುತ್ತಿರುವ ಲಲಿತ್ ಅಗರವಾಲ್ ಜೈಟೆಕ್ ಇಂಡಿಯಾದ ಭಾಗವಾಗಿರುವ ಎಫ್‌ಇಎಸ್‌ಎಸ್ ಚೇನ್‌ನ ನೂತನ ಇನ್‌ಬ್ಲಾಕ್ ಫೋನ್‌ಗಳ ಪ್ರಚಾರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದು,ಪ್ರಚಾರದ ಹೋರ್ಡಿಂಗ್‌ಗಳನ್ನು ಸ್ಥಾಪಿಸುವ ಕಾರ್ಯವನ್ನು ಪ್ರಮುಖ ಹಿಂದಿ ದೈನಿಕವೊಂದರ ಒಡೆತನದ ಜಾಹೀರಾತು ಸಂಸ್ಥೆಗೆ ಒಪ್ಪಿಸಿದ್ದರು. ಹೋರ್ಡಿಂಗ್‌ನಲ್ಲಿ ಆದಿತ್ಯನಾಥ್ ಮತ್ತು ಮೋದಿ ಚಿತ್ರಗಳನ್ನು ಬಳಸಲಾಗಿದ್ದು,ವಿಷಯವು ಬಹಿರಂಗಗೊಂಡ ಬಳಿಕ ಈ ಚಿತ್ರಗಳನ್ನು ತೆಗೆಯಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ದೈನಿಕದ ಜನರಲ್ ಮ್ಯಾನೇಜರ್‌ರನ್ನೂ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.
ತನ್ಮಧ್ಯೆ,ತನ್ನ ಸೋದರನನ್ನು ಸುಲಭದ ಗುರಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಮುಝಫ್ಫರ್‌ನಗರ ಶಾಸಕರೂ ಆಗಿರುವ ಕಪಿಲದೇವ್ ಅಗರವಾಲ್,ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಮತ್ತು ಲಲಿತ್ ತನ್ನ ವಿರುದ್ಧದ ಎಲ್ಲ ಆರೋಪಗಳಿಂದ ಮುಕ್ತನಾಗಲಿದ್ದಾನೆ ಎಂದು ತಿಳಿಸಿದರು.
ಘಟನೆಯ ಬಗ್ಗೆ ಕ್ಷಮೆಯನ್ನು ಯಾಚಿಸಿರುವ ಎಫ್‌ಇಎಸ್‌ಎಸ್ ಚೇನ್‌ನ ಸಿಇಒ ದುರ್ಗಾಪ್ರಸಾದ ತ್ರಿಪಾಠಿ ಅವರು, ಅನುಮತಿಯಿಲ್ಲದೆ ಚಿತ್ರಗಳನ್ನು ಬಳಸಿದ್ದು ಪ್ರಮಾದವಾಗಿತ್ತು ಎಂದು ಹೇಳಿದ್ದಾರೆ.
ಈ ವಿಷಯದಲ್ಲಿ ಸಿಬಿಐ ತನಿಖೆ ನಡೆಯಬೇಕೆಂದು ಉತ್ತರ ಪ್ರದೇಶ ಕಾಂಗ್ರೆಸ್ ಘಟಕವು ಆಗ್ರಹಿಸಿದೆ.







