ಕಾನೂನು ಉಲ್ಲಂಘಿಸಿ ಮತಾಂತರ: ಅಂತರ್ ಧರ್ಮೀಯ ದಂಪತಿ ವಿರುದ್ಧ ಪ್ರಕರಣ

ಡೆಹ್ರಾಡೂನ್,ಡಿ.30: ವಿವಾಹದ ಉದ್ದೇಶಕ್ಕಾಗಿ ಅನ್ಯಧರ್ಮಕ್ಕೆ ಮತಾಂತರಗೊಳ್ಳಲು ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಸೂಕ್ತ ವಿಧಾನವನ್ನು ಪಾಲಿಸದ ಆರೋಪದಲ್ಲಿ ಅಂತರ್ ಧರ್ಮೀಯ ದಂಪತಿ ಮತ್ತು ಇತರ ಇಬ್ಬರ ವಿರುದ್ಧ ಇಲ್ಲಿ ಪ್ರಕರಣ ದಾಖಲಾಗಿದೆ.
ದಂಪತಿ,ಸೆಪ್ಟೆಂಬರ್‌ನಲ್ಲಿ ನಡೆದಿದ್ದ ‘ನಿಖಾ’ ಸಂದರ್ಭದಲ್ಲಿ ಉಪಸ್ಥಿತರಿದ್ದ ವರನ ಚಿಕ್ಕಪ್ಪ ಮತ್ತು ನಿಖಾವನ್ನು ನೆರವೇರಿಸಿದ್ದ ಖಾಜಿ ವಿರುದ್ಧ ಮಂಗಳವಾರ ಎಫ್‌ಐಆರ್ ದಾಖಲಾಗಿದೆ ಎಂದು ಪಟೇಲ್ ನಗರ ಠಾಣಾಧಿಕಾರಿ ಪ್ರದೀಪ್ ರಾಣಾ ತಿಳಿಸಿದರು.
ಮಹಿಳೆಯು ತನ್ನ ಹೆತ್ತವರಿಗೆ ತಿಳಿಸದೆ ಇಸ್ಲಾಮಿಗೆ ಮತಾಂತರಗೊಂಡಿದ್ದಳು. ಕಾನೂನಿನಡಿ ಅಗತ್ಯವಾಗಿರುವಂತೆ ತನ್ನ ಮದುವೆಗೆ ಮುನ್ನ ಆಕೆ ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ನೀಡಿರಲಿಲ್ಲ ಎಂದರು.
ಆರೋಪಿಗಳು ಕಾಯ್ದೆಯ ಕಲಂ 3,8 ಮತ್ತು 12ನ್ನು ಉಲ್ಲಂಘಿಸಿದ್ದಾರೆ ಎಂದು ಸರ್ಕಲ್ ಆಫೀಸರ್ ಅನೂಜ್ ಕುಮಾರ್ ತಿಳಿಸಿದರು.
ಈ ಕಾಯ್ದೆಯಡಿ ಬಲವಂತದ ಮತಾಂತರವನ್ನು ನಿಷೇಧಿಸಲಾಗಿದೆ. ಮತಾಂತರಗೊಳ್ಳಲು ಬಯಸುವ ವ್ಯಕ್ತಿ ಒಂದು ತಿಂಗಳು ಮೊದಲು ಜಿಲ್ಲಾಧಿಕಾರಿಗಳಿಗೆ ಘೋಷಣೆಯನ್ನು ಸಲ್ಲಿಸಬೇಕು. ಯಾವುದೇ ವ್ಯಕ್ತಿಯನ್ನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಿಸಲು ಶುದ್ಧೀಕರಣ, ಸಂಸ್ಕಾರ ಅಥವಾ ಮತಾಂತರ ಪ್ರಕ್ರಿಯೆಯನ್ನು ನಡೆಸುವ ಧಾರ್ಮಿಕ ಪುರೋಹಿತರು ಅಥವಾ ಗುರುಗಳು ಆ ಬಗ್ಗೆ ಒಂದು ತಿಂಗಳು ಮೊದಲು ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ನೀಡುವುದು ಅಗತ್ಯವಾಗಿದೆ.
ಉತ್ತರಾಖಂಡದಲ್ಲಿ ಈ ಕಾಯ್ದೆಯು 2018ರಲ್ಲಿ ಜಾರಿಗ ಬಂದ ಬಳಿಕ ಇದು ಮೊದಲ ಉಲ್ಲಂಘನೆ ಪ್ರಕರಣವಾಗಿದೆ ಎಂದು ಕುಮಾರ್ ತಿಳಿಸಿದರು.







