ಮೊಬೈಲ್ ಗೋಪುರಕ್ಕೆ ಹಾನಿ ಮಾಡಿದ ಘಟನೆಗೆ ರಾಜನಾಥ್ ಸಿಂಗ್ ಖಂಡನೆ

ಹೊಸದಿಲ್ಲಿ, ಡಿ. 30: ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ ಸಂದರ್ಭ ಮೊಬೈಲ್ ಗೋಪುರಕ್ಕೆ ಹಾನಿ ಮಾಡಿದ ಘಟನೆಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಖಂಡಿಸಿದ್ದಾರೆ. ‘‘ಇಂತಹ ಘಟನೆಗಳು ಸಂಭವಿಸಬಾರದು. ಈ ಬಗ್ಗೆ ಪಂಜಾಬ್‌ನ ನಮ್ಮ ರೈತರು ಚಿಂತಿಸಬೇಕು. ವಿಧ್ವಂಸಕ ಕೃತ್ಯಗಳನ್ನು ನಿಲ್ಲಿಸಬೇಕು’’ ಎಂದು ರಾಜನಾಥ್ ಸಿಂಗ್ ವಿಶೇಷ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ‘ಮಾವೋವಾದಿಗಳು’ ಅಥವಾ ‘ಖಲಿಸ್ತಾನಿಗಳು’ನಂತಹ ಹೇಳಿಕೆ ನೀಡಿರುವುದನ್ನು ರಾಜನಾಥ್ ನಿರಾಕರಿಸಿದ್ದಾರೆ. ಅವರ ವಿರುದ್ಧ ಯಾರೊಬ್ಬರ ಅಂತಹ ಆರೋಪ ಮಾಡಬಾರದು ಎಂದು ಅವರು ಹೇಳಿದ್ದಾರೆ. ರೈತರ ಪ್ರತಿಭಟನೆಯಿಂದ ಸರಕಾರ ನೋವು ಅನುಭವಿಸಿತು ಎಂದು ಅವರು ತಿಳಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿದ ರಾಜನಾಥ್ ಸಿಂಗ್, ತಾನು ಕೃಷಿ ಕುಟುಂಬದಲ್ಲಿ ಜನಿಸಿರುವುದರಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗಿಂತ ಕೃಷಿ ಬಗ್ಗೆ ತನಗೆ ಹೆಚ್ಚು ತಿಳಿದಿದೆ ಎಂದರು. ಕೃಷಿ ಕಾಯ್ದೆಗಳು ರೈತರಿಗೆ ಅನುಕೂಲಕರವಾಗಿವೆ. ಮಾತುಕತೆಯನ್ನು ‘ಯೆಸ್’ ಅಥವಾ ‘ನೋ’ ಮನಸ್ಥಿತಿಯಲ್ಲಿ ನಡೆಸಬಾರದು ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಒಕ್ಕೂಟ ಹಾಗೂ ಸರಕಾರದ ನಡುವಿನ 6ನೇ ಸುತ್ತಿನ ಮಾತುಕತೆ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ರೈತರು ಮೂರು ಕೃಷಿ ಕಾಯ್ದೆಗಳ ಪ್ರತಿ ಕಲಂ ಬಗ್ಗೆ ಮಾತುಕತೆ ನಡೆಸಬೇಕು. ಏನಾದರೂ ಅಗತ್ಯ ಇದ್ದರೆ, ಸರಕಾರ ತಿದ್ದುಪಡಿ ಮಾಡಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.





