ಉಪಸಭಾಪತಿ ಧರ್ಮೇಗೌಡ ಸಾವು ಪ್ರಕರಣ: ರೈಲು ಚಾಲಕ ಹೇಳಿದ್ದು ಹೀಗೆ...

ಚಿಕ್ಕಮಗಳೂರು, ಡಿ.30: ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರು ಸೋಮವಾರ ರಾತ್ರಿ ರೈಲೊಂದಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಯಾವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. ಈ ಗೊಂದಲಕ್ಕೆ ಸದ್ಯ ತೆರೆಬಿದ್ದಿದ್ದು, ಧರ್ಮೇಗೌಡ ಅವರು ಆತ್ಮಹತ್ಯೆಗೆ ಶರಣಾಗಲು ಜನ್‍ಶತಾಬ್ಧಿ ಎಕ್ಸ್ ಪ್ರೆಸ್ ರೈಲನ್ನೇ ಬಳಸಿಕೊಂಡಿದ್ದಾರೆಂಬುದು ದೃಢಪಟ್ಟಿದೆ.
ಜನ್‍ಶತಾಬ್ಧಿ ಎಕ್ಸ್‍ಪ್ರೆಸ್ ರೈಲೇ ಧರ್ಮೇಗೌಡ ಅವರಿಗೆ ಢಿಕ್ಕಿ ಹೊಡೆದ ರೈಲಾಗಿದ್ದು, ಈ ರೈಲಿನ ಚಾಲಕ ಸಿದ್ದರಾಮ್ ಅರಸೀಕೆರೆ ರೈಲ್ವೆ ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ಸೂರಜ್ ಅವರಿಗೆ ಈ ಸಂಬಂಧ ಹೇಳಿಕೆ ನೀಡಿದ್ದಾರೆಂದು ಬುಧವಾರ ತಿಳಿದು ಬಂದಿದೆ.
ಸೋಮವಾರ ರಾತ್ರಿ ಕಡೂರಿನಿಂದ ಬೆಂಗಳೂರಿಗೆ ಹೊರಟಿದ್ದ ಜನ್‍ಶತಾಬ್ಧಿ ಎಕ್ಸ್ ಪ್ರೆಸ್ ರೈಲು ಕಡೂರು ಸಮೀಪದ ಗುಣಸಾಗರ ಗ್ರಾಮದ ಬಳಿ ಹೋಗುತ್ತಿದ್ದ ವೇಳೆ ಸುಮಾರು 7 ಗಂಟೆ ಹೊತ್ತಿಗೆ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬರು ರೈಲ್ವೆ ಹಳಿಯ ಮೇಲೆ ನಿಂತಿದ್ದರು. ರೈಲು ವೇಗವಾಗಿ ಬರುವಾಗ ಹಳಿಯ ಮೇಲೆ ಆ ವ್ಯಕ್ತಿ ರೈಲಿಗೆ ನೇರಾ ನೇರವಾಗಿ ನಿಂತುಕೊಂಡಿದ್ದರು. ರೈಲು ವೇಗವಾಗಿ ಹೋಗುತ್ತಿದ್ದರಿಂದ ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಜನ್‍ಶತಾಬ್ಧಿ ರೈಲು ಚಾಲಕ ಸಿದ್ದರಾಮ್ ಅರಸೀಕೆರೆ ರೈಲ್ವೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ.







