ಜ.1ರಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಸೂಚನೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.30: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳವುದು ಅವಶ್ಯವಿದ್ದು, ಜ.1ರಿಂದ ಪಂಚಾಯತ್ ಅಧ್ಯಕ್ಷರು, ಆಡಳಿತಾಧಿಕಾರಿ, ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಮೇಲ್ವಿಚಾರಕರು ಒಳಗೊಂಡ ಸಮಿತಿಯು ಮನೆ ಮನೆ ಸಮೀಕ್ಷೆ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚಿಸಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಇಲಾಖೆ, ಸಂವಿಧಾನದ ಕಲಂ 21(ಎ) ಪ್ರಕಾರ 6ರಿಂದ 14ವರ್ಷದ ಪ್ರತಿ ಮಗು 8ವರ್ಷಗಳ ಶಾಲಾ ಶಿಕ್ಷಣವನ್ನು ಪಡೆಯವುದು ಮೂಲಭೂತ ಹಕ್ಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ಸ್ಥಳೀಯ ಸರಕಾರಗಳು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಮಾರ್ಗಸೂಚಿ ಪ್ರಕಟಿಸಿದೆ.
ಜ.1ರಿಂದ ಫೆಬ್ರವರಿವರೆಗೆ ಗ್ರಾಮ ಪಂಚಾಯತ್ ಶಿಕ್ಷಣ ಕಾರ್ಯಪಡೆ ಸದಸ್ಯರುಗಳು ತಮ್ಮ ಶಾಲಾ ವ್ಯಾಪ್ತಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳ ಮೂಲಕ ಸಮೀಕ್ಷೆ ನಡೆಸಿ ಶಾಲೆಗೆ ದಾಖಲಾಗದ, ದಾಖಲಾದರೂ ಹಾಜರಾಗದ ಮಕ್ಕಳನ್ನು ಗುರುತಿಸುವುದು. ವಿಶೇಷ ಮನವೊಲಿಕೆ ಕಾರ್ಯಕ್ರಮ ಅವಶ್ಯವಿದ್ದಲ್ಲಿ ಸಂಬಂಧಿಸಿದ ಶಾಲೆಯ ಮುಖ್ಯಶಿಕ್ಷಕರಿಂದ ಹಮ್ಮಿಕೊಳ್ಳುವುದು.
ಶಾಲೆಯಿಂದ ಹೊರಗುಳಿದ ಮಗು ಅನಾರೋಗ್ಯ ಪೀಡಿತವಾಗಿದ್ದಲ್ಲಿ ಅಗತ್ಯ ವೈದ್ಯಕೀಯ ತಪಾಸಣೆ ಒಳಪಡಿಸುವುದು. ಲಭ್ಯವಿರುವ ಸರಕಾರಿ ಯೋಜನೆ ಅಡಿಯಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಲು ನೆರವು ನೀಡುವುದು. ಮಗುವಿನ ಕುಟುಂಬದಲ್ಲಿ ಆರೋಗ್ಯ ಕಾರ್ಡ್ ಪಡೆದಿದ್ದಲ್ಲಿ ಸದರಿ ಕಾರ್ಡ್ನ ಪ್ರಯೋಜನ ಪಡೆಯಲು ಸಹಾಯ ಮಾಡಬೇಕೆಂದು ತಿಳಿಸಲಾಗಿದೆ.
ಶಾಲೆಗೆ ಬರಲು ಸಾಧ್ಯವಾಗದ ವಿಕಲ ಚೇತನ ಮಗುವಿಗೆ ಶಿಕ್ಷಣವನ್ನು ಮಗುವು ಇರುವೆಡೆಯಲ್ಲೇ ಶಿಕ್ಷಣ ನೀಡಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ತರಬೇತಿ ಹೊಂದಿದ ಸ್ಥಳೀಯ ಶಿಕ್ಷಕಿ, ಶಿಕ್ಷಕಿ ಮಗುವಿಗೆ ಸಾಧ್ಯವಾಗುವ ಕನಿಷ್ಠ ಮಟ್ಟದ ಶಿಕ್ಷಣ ನೀಡಿ ಶಾಲಾ ಮುಖ್ಯವಾಹಿನಿಗೆ ತರುವುದು ಅಗತ್ಯವಿದೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಶಾಲೆಯಿಂದ ಹೊರಗುಳಿದ ಮಗು ಪೋಷಕರೊಂದಿಗೆ ಕೆಲಸ ಮಾಡುತ್ತಿದ್ದರೆ, ಇಲ್ಲವೆ ಬೀದಿ ಮಗುವಾಗಿದ್ದಲ್ಲಿ, ವಲಸೆ ಮಗುವಾಗಿದ್ದಲ್ಲಿ, ಅಲೆಮಾರಿ ಮಗುವಾಗಿದ್ದಲ್ಲಿ, ಮನೆಯಿಂದ ಓಡಿಹೋದ ಮಗುವಾಗಿದ್ದಲ್ಲಿ, ಅಂತಹ ಮಕ್ಕಳನ್ನು ಗುರುತಿಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿ ಶಾಲೆಗೆ ಬರುವಂತೆ ಮನವೊಲಿಸಿ, ಅಗತ್ಯ ನೆರವನ್ನು ನೀಡಬೇಕೆಂದು ಸುತ್ತೋಲೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.







