ಫೈಝರ್ ಲಸಿಕೆ ಪಡೆದ ನರ್ಸ್‌ಗೆ ಕೊರೋನ ಪಾಸಿಟಿವ್

ವಾಶಿಂಗ್ಟನ್,ಡಿ.30: ಫೈಝರ್ ಕಂಪೆನಿಯ ಕೊರೋನ ವೈರಸ್ ಲಸಿಕೆಯನ್ನು ಚುಚ್ಚಿಸಿಕೊಂಡ ಒಂದು ವಾರದ ಬಳಿಕ ಅಮೆರಿಕದ ನರ್ಸ್ ಒಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವುದಾಗಿ ಎಬಿಸಿ ನ್ಯೂಸ್‌ನ ಅಂಗಸಂಸ್ಥೆಯೊಂದು ವರದಿ ಮಾಡಿದೆ.
ಎರಡು ಆಸ್ಪತ್ರೆಗಳಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮ್ಯಾಥ್ಯೂ ಡಬ್ಲು. ಅವರು, ಡಿಸೆಂಬರ್ 18ರಂದು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಪೋಸ್ಟ್ ಒಂದರಲ್ಲಿ ತಾನು ಫೈಝರ್ ಲಸಿಕೆ ಚುಚ್ಚಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಲಸಿಕೆಯನ್ನು ಪಡೆದ ಬಳಿಕ ತನ್ನ ತೋಳಿನಲ್ಲಿ ಬಾವು ಕಾಣಿಸಿಕೊಂಡಿತ್ತು, ಆದರೆ ಬೇರೆ ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲವೆಂದು ಹೇಳಿದ್ದರು.
ಆದರೆ ಆರು ದಿನಗಳ ಆನಂತರ ಅಂದರೆ ಕ್ರಿಸ್‌ಮಸ್ ಮುನ್ನಾ ದಿನದಂದು ಅವರು ಕೋವಿಡ್-19 ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಸ್ವಸ್ಥರಾಗಿದ್ದರು. ಅವರಿಗೆ ತೀವ್ರ ಚಳಿಯ ಜೊತೆಗೆ ಸ್ನಾಯುಸೆಳೆತ ಹಾಗೂ ಬಳಲಿಕೆಯುಂಟಾಗಿತ್ತು. ಮರುದಿನ ಅವರು ಕೋವಿಡ್-19 ತಪಾಸಣಾ ಕೇಂದ್ರಕ್ಕೆ ತೆರಳಿ ಪರೀಕ್ಷೆಗೊಳಗಾದಾಗ ಅವರಿಗೆ ಕೋವಿಡ್-19 ಪಾಸಿಟಿವ್ ಬಂದಿತ್ತು.
ಆದರೆ ಇಂತಹ ವಿದ್ಯಮಾನವು ನಡೆದಿರುವುದು ಅನಿರೀಕ್ಷಿತವಲ್ಲವೆಂದು ಸ್ಯಾನ್‌ಡಿಯಾಗೊದ ಸೋಂಕು ರೋಗ ತಜ್ಞ ಕ್ರಿಸ್ಟಿಯಾನ್ ರ್ಯಾಮರ್ಸ್ ತಿಳಿಸಿದ್ದಾರೆ.
ಆದರೆ ಕೋವಿಡ್-19 ಲಸಿಕೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು 10ರಿಂದ 14 ದಿನಗಳು ಬೇಕಾಗುವುದೆಂದು ತಮಗೆ ಲಸಿಕೆಯ ಕ್ಲಿನಿಕಲ್ ಟ್ರಯಲ್ ಸಂದರ್ಭದಲ್ಲಿ ಗಮನಕ್ಕೆ ಬಂದಿತ್ತು ಎಂದು ರಾಮರ್ಸ್ ತಿಳಿಸಿದ್ದಾರೆ.
ಲಸಿಕೆಯ ಮೊದಲನೆಯ ಡೋಸ್‌ನಿಂದ ದೇಹಕ್ಕೆ ಶೇ.50ರಷ್ಟು ರೋಗನಿರೋಧಕ ಶಕ್ತಿ ದೊರೆಯುತ್ತದೆ ಹಾಗೂ ಶೇ.95ರಷ್ಟು ರೋಗನಿರೋಧಕ ಶಕ್ತಿ ಬರಬೇಕಾದರೆ ಎರಡನೇ ಲಸಿಕೆಯ ಅಗತ್ಯವಿರುತ್ತದೆ ಎಂದವರು ಹೇಳಿದ್ದಾರೆ.







