ಗ್ರಾ.ಪಂ. ಚುನಾವಣೆ : ಬೆಳ್ತಂಗಡಿ ತಾಲೂಕಿನಲ್ಲಿ ಬಿಜೆಪಿಗೆ ಮುನ್ನಡೆ
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಗ್ರಾಪಂನ 46 ಗ್ರಾ. ಪಂಗಳ 631 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ತಡ ರಾತ್ರಿಯ ವರೆಗೂ ಮುಂದುವರಿದಿದೆ. ತಾಲೂಕಿನಲ್ಲಿ ಮೊದಲ ಮೂರು ಹಂತದಲ್ಲಿ ಹೊರ ಬಂದ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿಕೊಂಡಿದೆ.
ಲಾಯಿಲ, ಉಜಿರೆ, ದರ್ಮಸ್ಥಳ, ನಾರಾವಿ, ಮಚ್ಚಿನ, ಸುಲ್ಕೇರಿ ಮುಂಡಾಜೆ, ನಿಡ್ಲೆ, ಶಿಶಿಲ, ಶಿಬಾಜೆ, ಬಂದಾರು, ನೆರಿಯ, ಚಾರ್ಮಾಡಿ, ಕೊಕ್ಕಡ, ಪುದುವೆಟ್ಟು, ಬಳೆಂಜ, ಕಲ್ಮಂಜ, ಕುಕ್ಕೇಡಿ, ಶಿರ್ಲಾಲು ಗ್ರಾ. ಪಂಗಳಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿಕೊಂಡಿದೆ.
ತೆಕ್ಕಾರು, ತಣ್ಣೀರುಪಂತ, ಬಾರ್ಯ, ಕಾಶೀಪಟ್ನ ಸೇರಿದಂತೆ ಕೆಲವೇ ಪಂಚಾಯತುಗಳಲ್ಲಿ ಕಾಂಗ್ರೆಸ್ಸ್ ಮೊದಲ ಹಂತದಲ್ಲಿ ಮುನ್ನಡೆಯನ್ನು ಸಾಧಿಸಿದೆ. ಮೊದಲ ಎರಡು ಹಂತದ ಎಣಿಕೆಯನ್ನು ಗಮನಿಸಿದರೆ ತಾಲೂಕಿನ ಬಹುತೇಕ ಗ್ರಾಮ ಪಂಚಾಯತುಗಳು ಬಿಜೆಪಿ ಬೆಂಬಲಿತರ ಪಾಲಾಗುವ ಸೂಚನೆ ಕಂಡು ಬರುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಎಸ್.ಡಿ.ಪಿ.ಐ ಬೆಂಬಲಿತರು ಗೆಲುವು ಪಡೆದುಕೊಂಡಿದ್ದಾರೆ.
ತಾಲೂಕಿನಲ್ಲಿ 7 ಮಂದಿ ಬಿಜೆಪಿ ಬೆಂಬಲಿತರು ಅವಿರೋಧ ಆಯ್ಕೆಯಾಗಿದ್ದು, 1432 ಮಂದಿ ಅಂತಿಮ ಕಣದಲ್ಲಿದ್ದರು. ಮತ ಎಣಿಕೆ ಬೆಳಗ್ಗೆ ಏಳು ಗಂಟೆ ಪ್ರಾರಂಭವಾಗಬೇಕಿತ್ತು. ಆದರೆ ಒಂದು ಗಂಟೆ ತಡವಾಗಿ ಮತ ಎಣಿಕೆ ಪ್ರಾರಂಭವಾಯಿತು. ಮೊದಲನೇ ಸುತ್ತಿನ ಮತ ಎಣಿಕೆಯು ಸುಮಾರು ಮಧ್ಯಾಹ್ನ ವೇಳೆಗೆ ಮುಗಿದಿದ್ದು ಬಳಿಕ ಎರಡನೇ ಸುತ್ತಿನ ಮತ ಎಣಿಕೆ ತಡವಾಗಿ ಆರಂಭವಾದ ಕಾರಣ ಫಲಿತಾಂಶ ಬರಲು ತುಂಬಾ ತಡವಾಯಿತು.
ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿಗಳು ಮತ್ತು ಓರ್ವ ಏಜೆಂಟನ್ನು ಮಾತ್ರ ಪ್ರವೇಶಕ್ಕೆ ಅನುವು ಮಾಡಲಾಗಿತ್ತು.
ಸಿಬ್ಬಂದಿಗಳಿಗೆ ಭೋಜನ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ
ಒಟ್ಟು 204 ಮತ ಎಣಿಕೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಇಲಾಖೆ ಊಟದ ವ್ಯವಸ್ಥೆ ಮಾಡಿದ್ದು ಮಧ್ಯಾಹ್ನ ಎರಡು ಗಂಟೆಯಾಗುತ್ತಿ ದ್ದಂತೆ ಊಟಕ್ಕೆ ಬದಲಾಗಿ ಪುಲಾವ್ ನೀಡಿದ್ದರು.
ಸುಮಾರು ಅರ್ಧದಷ್ಟು ಇದ್ದ ಸಿಬ್ಬಂದಿಗಳು ಹಸಿವಿನಿಂದ ಬಳಲಿ ಮೇಲಾಧಿಕಾರಿಗಳಲ್ಲಿ ದೂರು ನೀಡಿದರು. ಊಟದ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿದ್ದರಿಂದ ಸಿಬ್ಬಂದಿಗಳಲ್ಲೂ ಹಸಿವಿನಿಂದ ಉತ್ಸಾಹ ಕಡಿಮೆಯಾಗಿತ್ತು. ಮತ ಎಣಿಕೆ ಕೇಂದ್ರದಲ್ಲಿ ತಹಶೀಲ್ದಾರ್ ಮಹೇಶ್ ಜಿ, ತಾ.ಪಂ ಇಒ ಕುಸುಮಾಧರ್, ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ., ಡಿಎಸ್ ಬಿ ಇನ್ಸ್ ಪೆಕ್ಟರ್ ರವಿ ಪಿ.ಎಸ್., ಎಸ್‌ಐಗಳಾದ ನಂದಕುಮಾರ್, ಪವನ್ ಕುಮಾರ್, ಕುಮಾರ್ ಕಾಂಬ್ಳೆ ಸ್ಥಳದಲ್ಲೇ ಇದ್ದು ಮತ ಎಣಿಕೆ ಕಾರ್ಯಕ್ಕೆ ಸಹಕರಿಸಿದರು.
ಮತ ಎಣಿಕೆ ಕೇಂದ್ರದ ಮುಂದೆ ಹಲವು ಬಾರಿ ಗೊಂದಲಗಳುಂಟಾದವು. ಪೊಲೀಸರು ಲಾಠಿ ಬೀಸಿ ಗುಂಪುಗಳನ್ನು ಚದುರಿಸಿದರು.







